9ಎ ನಾಲೆಗೆ ನೀರು ಹರಿಸಲು ಕ್ರಮ ವಹಿಸಿ

06 Arakera Photo 03
Published on

ಅರಕೇರಾ: ಎನ್‌ಆರ್‌ಬಿಸಿ ಅರಕೇರಾ ಬ್ರಾಂಚ್ 9ಎ ಅನ್ವರ ವ್ಯಾಪ್ತಿಯ ಕಾಲುವೆಯಲ್ಲಿ ಕುಸಿದಿರುವ ಮಣ್ಣನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕೆಬಿಜೆಎನ್‌ಎಲ್ ಚಿಕ್ಕಹೊನ್ನಕುಣಿ ವಿಭಾಗದ ಇಇಗೆ ಬರೆದ ಮನವಿಯನ್ನು ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಗಿರಿಜಮ್ಮಗೆ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಮಂಗಳವಾರ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಸಂಗಮೇಶ ಚವ್ಹಾಣ್ ಮಾತನಾಡಿ, ನೀರಿದ್ದಾಗಲೂ ಕೃಷಿ ಜಮೀನುಗಳಿಗೆ ಸಿಗದಿದ್ದರೆ, ರೈತರ ಮೇಲಿರುವ ಅಧಿಕಾರಿಗಳ ಉದಾಸೀನತೆ ಸ್ಪಷ್ಟವಾಗಿ ಕಾಣುತ್ತದೆ. ಅಧಿಕಾರಿಗಳು ನಾಲೆಗಳ ಸಮರ್ಪಕ ನಿರ್ವಹಣೆ ಮಾಡದಿರುವುದರಿಂದ ಈ ಸಮಸ್ಯೆಯಾಗಿದೆ ಎಂದು ದೂರಿದರು.

ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಬಾರಿಯೂ ಸಮರ್ಪಕ ಮಳೆ ಬಾರದಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಕಾಲುವೆಗಳ ದುಸ್ಥಿತಿಯಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದರು.

ಅರಕೇರಾ ಬ್ರಾಂಚ್ ವ್ಯಾಪ್ತಿಯ 9ಎ ಲ್ಯಾಟರಲ್ ಕಾಲುವೆ ಹಾದು ಹೋದ ಕೊನೆಯ ಭಾಗದ ಜಾಗೀರ ಜಾಡಲದಿನ್ನಿ, ಮಲ್ಲೆದೇವರಗುಡ್ಡ, ಮರಕಂದಿನ್ನಿ, ಬಂಡೆಗುಡ್ಡ, ಜುಟ್ಟಮರಡಿ ಗ್ರಾಮದ ಕೃಷಿ ಜಮೀನುಗಳಿಗೆ ಕೂಡಲೇ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಗಮೇಶ ಚವ್ಹಾಣ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net