99 ಐಟಿಐ ಕುಶಲಕರ್ಮಿಗಳಿಗೆ ನೌಕರಿ

ITI
Published on

ಬೀದರ್: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಇನ್ಫಿಸೋಸ್೯ ಕಂಪನಿ ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಜಿಲ್ಲೆಯ 99 ಐಟಿಐ ಕುಶಲಕರ್ಮಿಗಳು ಆಯ್ಕೆಯಾಗಿದ್ದಾರೆ.

ಜಿಲ್ಲೆಯ ವಿವಿಧೆಡೆಯ 182 ತರಬೇತುದಾರರು ವಿವಿಧ ವೃತ್ತಿಗಳಲ್ಲಿ ಉದ್ಯೋಗಕ್ಕಾಗಿ ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅರ್ಹತೆ, ಅನುಭವ, ನೇರ ಸಮಾಲೋಚನೆ ಹಾಗೂ ಕೆಲವೊಂದು ಕೌಟುಂಬಿಕ ಹಿನ್ನೆಲೆ ಆಧರಿಸಿ 99 ಕುಶಲಕರ್ಮಿಗಳನ್ನು ಆಯ್ಕೆ ಮಾಡಿ ನೇಮಕಾತಿ ಪತ್ರ ನೀಡಲಾಯಿತು. ಆಯ್ಕೆಯಾದವರಿಗೆ ಆರಂಭಿಕವಾಗಿ 9000 ರೂ. ಮಾಸಿಕ ವೇತನ, ರಿಯಾಯ್ತಿ ದರದ ಕ್ಯಾಂಟೀನ್ನಲ್ಲಿ ಉಪಾಹಾರ, ಊಟ, ಉಚಿತ ವಸತಿ, ಇಎಸ್ಐ, ಪಿಎಫ್ ಸೌಲಭ್ಯ ಸಿಗಲಿದೆ.

ಸಂದರ್ಶನಕ್ಕೆ ಚಾಲನೆ ನೀಡಿದ ಡಿಸಿಸಿ ಬ್ಯಾಂಕ್ ಹುಮನಾಬಾದ್ ತಾಲೂಕು ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಚಲುವಾ ಮಾತನಾಡಿ, ಇಲ್ಲಿನ ಸರ್ಕಾರಿ ಐಟಿಐ ಕಾಲೇಜು ತರಬೇತುದಾರರಿಗೆ ಗುಣಾತ್ಮಕ ತರಬೇತಿ ಜತೆಗೆ ಸಂದರ್ಶನ ಆಯೋಜಿಸಿ ನೌಕರಿ ಕೊಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ವಿಜಯ ಮಹಾಂತೇಶ ಮಾತನಾಡಿ, ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಲಾಗುತ್ತಿದೆ. ನಂತರ ಕೌಶಲ, ಕ್ಷಮತೆ, ಸೇವಾ ಅನುಭವ, ದಿನನಿತ್ಯದ ಅವಲೋಕನದ ಅಂಕಗಳನ್ನು ಆಧರಿಸಿ ಕಾಯಂ ಮಾಡುವ ನಿಯಮವಿದೆ ಎಂದು ಹೇಳಿದರು.

ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿದ್ದರು. ಕಂಪನಿ ಜನರಲ್ ಮ್ಯಾನೇಜರ್ ಕಿಶೋರಕುಮಾರ, ಸಿಇಒ ಸಿರಿಶಾ, ಹಿರಿಯ ಪತ್ರಕರ್ತ ಗಂಧರ್ವ ಸೇನಾ, ಐಟಿಐ ಸಂಸ್ಥೆ ಆಡಳಿತಾಧಿಕಾರಿ ಪ್ರಕಾಶ ಜನವಾಡಕರ್, ಅಧೀಕ್ಷಕ ಸುದರ್ಶನಕುಮಾರ ಮಂಗಲಗಿಕರ್ ಇದ್ದರು. ಯುಸೂಫ್ಮಿಯಾ ಜೋಜನಾ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಣೆ ಮಾಡಿದರು. ರಾಘವೇಂದ್ರ ಮುತ್ತಂಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net