ಶ್ರೀಮಂತರ ಸೋಗಿನಲ್ಲಿ ಫರ್ನಿಚರ್ ಅಂಗಡಿ ಮಾಲೀಕನಿಗೆ 99.65 ಲಕ್ಷ ರೂ. ವಂಚನೆ

Published on

ಮೈಸೂರು: ಶ್ರೀಮಂತರ ಸೋಗಿನಲ್ಲಿ ಖರೀದಿಗೆ ಬಂದ ಕುಟುಂಬ ಫರ್ನಿಚರ್ ಅಂಗಡಿ ಮಾಲೀಕನಿಗೆ 99.65 ಲಕ್ಷ ರೂ. ವಂಚನೆ ಮಾಡಿದ್ದು, ಒಂದೇ ಕುಟುಂಬದ 5 ಜನರ ವಿರುದ್ಧ ದೂರು ದಾಖಲಾಗಿದೆ.

ಕೇರಳಾ ರಾಜ್ಯ ಕ್ಯಾಲಿಕಟ್‌ನ ಹಕ್ಕಿನ್, ಹಫ್ತಾತ್ ಬೀವಿ, ಮೊಹಮದ್ ಖಾಲೀಸ್, ಮೊಹಮದ್ ವಾಸೀಲ್, ಪ್ರವೀಜ್ ವಿರುದ್ಧ ವಂಚನೆಗೆ ಒಳಗಾದ ಹೂಟಗಳ್ಳಿಯಲ್ಲಿರುವ ಟ್ರೀ ಟ್ರೆಂಡ್ಸ್ ಅಂಗಡಿ ಮಾಲೀಕ ಎ.ಸಿ.ರಾಯ್ ದೂರು ನೀಡಿದ್ದಾರೆ.

ರಾಯ್ ಅವರ ಅಂಗಡಿಗೆ ಶ್ರೀಮಂತರ ಸೋಗಿನಲ್ಲಿ ಐಶಾರಾಮಿ ಕಾರಿನಲ್ಲಿ ಬಂದ ಹಕ್ಕಿನ್ ಹಾಗೂ ಕುಟುಂಬ, ತಾನು ಕೇರಳದಲ್ಲಿ 2 ಮನೆ ಖರೀದಿಸಿದ್ದು, ಫರ್ನಿಚರ್‌ಗಳು ಬೇಕೆಂದು ನಂಬಿಸಿದೆ. ವಾಟ್ಸ್‌ಆ್ಯಪ್ ವಿಡಿಯೋ ಕಾಲ್ನಲ್ಲಿ ತನ್ನ ಮನೆ ತೋರಿಸಿ ಇಂಜಿನಿಯರ್ ಜತೆ ಮಾತನಾಡಿಸಿ ಹೆಚ್ಚು ಬೆಲೆ ಬಾಳುವ ಪೀಠೋಪಕರಣ ಖರೀದಿಸಿದೆ. ಸುಮಾರು 40 ಲಕ್ಷ ರೂ. ಮೌಲ್ಯದ ಫರ್ನಿಚರ್ ಖರೀದಿಸಿ ಪ್ಯಾಕ್ ಮಾಡುವಂತೆ ತಿಳಿಸಿ, ಖಾಲಿ ಚೆಕ್‌ಗಳನ್ನು ನೀಡಿ ತಾನು ಹೇಳಿದ ದಿನ ಚೆಕ್ ಬ್ಯಾಂಕ್‌ಗೆ ಹಾಕುವಂತೆ ಮಾಡುವಂತೆ ತಿಳಿಸಿ, ಚೆಕ್ ಕ್ಯಾಶ್ ಆದ ನಂತರ ಫರ್ನಿಚರ್‌ಗಳನ್ನು ಕಳುಹಿಸುವಂತೆ ಹೇಳಿ ತೆರಳಿದ್ದಾರೆ ಎನ್ನಲಾಗಿದೆ.

ಒಂದೆರಡು ದಿನಗಳ ನಂತರ ಖಾಲಿ ಚೆಕ್‌ನಲ್ಲಿ 40 ಲಕ್ಷ ರೂ. ತುಂಬಿ ಹಕ್ಕಿನ್‌ನ ಅನುಮತಿಯಂತೆ ಬ್ಯಾಂಕ್‌ಗೆ ನಗದೀಕರಿಸಲು ಹಾಕಿದ್ದಾರೆ. ಆದರೆ ಚೆಕ್ ಹಣವಿಲ್ಲದೆ ಬೌನ್ಸ್ ಆಗಿದೆ. ಈ ವಿಚಾರ ಹಕ್ಕಿನ್‌ಗೆ ತಿಳಿಸಿದಾಗ ತಾನೇ ಬರುವುದಾಗಿ ತಿಳಿಸಿದ್ದಾನೆ. ಕೆಲವು ದಿನಗಳ ನಂತರ ಅಂಗಡಿಗೆ ಬಂದ ಹಕ್ಕಿನ್ ತನ್ನ ಖಾತೆಯಲ್ಲಿ 124 ಕೋಟಿ ರೂ. ಬ್ಯಾಲೆನ್ಸ್ ಇದೆ. ಐಟಿಯವರು ಫ್ರೀಜ್ ಮಾಡಿದ್ದಾರೆ. ಆದ್ದರಿಂದ ಚೆಕ್‌ಬೌನ್ಸ್ ಆಗಿದೆ ಎಂದು ಹೇಳಿ ಹಲವು ದಾಖಲೆಗಳನ್ನು ತೋರಿಸಿ ನಂಬಿಸಿದ್ದಾನೆ ಎನ್ನಲಾಗಿದೆ.

ಅಕೌಂಟ್ ಅನ್‌ಫ್ರೀಜ್ ಆದರೆ ನಿನ್ನ ಬಳಿಯೇ ಫರ್ನಿಚರ್ ಖರೀದಿ ಮಾಡ್ತೀನಿ. ಅಲ್ಲದೆ ನನಗೆ ಹಣ ನೀಡಿದರೆ ಶೇ.25 ಕಮೀಷನ್ ಸಹ ಕೊಡುವುದಾಗಿ ಆಮಿಷವೊಡ್ಡಿ ನಂಬಿಸಿ ಅಕೌಂಟ್ ಅನ್‌ಫ್ರೀಜ್ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ.

ಹಕ್ಕಿನ್ ತೋರಿಸಿದ ದಾಖಲೆಗಳು ಹಾಗೂ ಮೋಡಿ ಮಾತು ನಂಬಿದ ರಾಯ್ ಅವರು ಹಂತ ಹಂತವಾಗಿ 99,65,500 ರೂ. ಕೊಟ್ಟಿದ್ದಾರೆ. ಲಕ್ಷಾಂತರ ರೂ. ಬಂದ ನಂತರ ಹಕ್ಕಿನ್ ಈ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗುವುದಿಲ್ಲ, ದೆಹಲಿಯಿಂದಲೇ ಬಗೆಹರಿಸಬೇಕೆಂದು ಮತ್ತಷ್ಟು ಹಣದ ಸಹಾಯ ಕೇಳಿ, ಮತ್ತೊಂದು ಕೋಟ್ಯಂತರ ವಹಿವಾಟಿನ ಆಮಿಷ ತೋರಿಸಿದ್ದಾನೆ.

ಈ ವೇಳೆಗಾಗಲೇ ರಾಯ್ ತಾವು ಮೋಸ ಹೋಗಿರುವುದು ಖಚಿತವಾಗಿದೆ. ಹಕ್ಕಿನ್ ಸೇರಿದಂತೆ ಕುಟುಂಬದ ಐವರ ವಿರುದ್ಧ ರಾಯ್ ದೂರು ನೀಡಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net