ಭಾರತ ಕಮ್ಯುನಿಸ್ಟ್ ಪಕ್ಷದ ೯೮ನೇ ಸಂಸ್ಥಾಪನಾ ದಿನಾಚರಣೆ

MDK04
Published on

ಮಡಿಕೇರಿ: ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಭಾರತ ಕಮ್ಯುನಿಸ್ಟ್ ಪಕ್ಷದ ೯೮ನೇ ಸಂಸ್ಥಾಪನಾ ದಿನಾಚರಣೆಯನ್ನು ಮಾದಾಪುರ ಆದಿದ್ರಾವಿಡ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ, ಬೆಲೆ ಏರಿಕೆ, ಟ್ಯಾಕ್ಸ್‌ನಿಂದಾಗಿ ದುಡಿಯುವ ವರ್ಗ, ಲೈನ್ ಮನೆಯ ವಾಸಿಸುತ್ತಿರುವ ಕೂಲಿ ಕರ್ಮಿಕರು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಆಮೀಷಗಳನ್ನು ಒಡ್ಡಿ ಜನಸಮಾನ್ಯರನ್ನು ವಂಚಿಸುತ್ತಿದ್ದಾರೆ ಹೊರತು ಶ್ರಮಿಕ ನೋವಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಸಿಪಿಐ ಕೊಡಗು ಜಿಲ್ಲಾ ಕಾರ್ಯದರ್ಶಿ ಕೆ.ಸುನೀಲ್ ಮಾತನಾಡಿ, ಭಾರತ ಕಮ್ಯುನಿಸ್ಟ್ ಪಕ್ಷ ದುಡಿಯುವ ವರ್ಗ, ಕೂಲಿ ಕಾರ್ಮಿಕರು ಹಾಗೂ ಈ ದೇಶದ ಅತ್ಯಂತ ಕೆಳವರ್ಗದ ಪರವಾಗಿ, ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು ಹಾಗೂ ಕಾರ್ಮಿಕರು ಒಗ್ಗಟ್ಟು ಪ್ರದರ್ಶಿಸಿದರೆ ನಮಗೆ ಈ ದೇಶವನ್ನು ಆಳ್ವಿಕೆ ಮಾಡುವ ಶಕ್ತಿ ದೊರಕಲಿದೆ ಎಂದರು.


ರೈತ ಮುಖಂಡ ಲಕ್ಷ್ಮಣ್ ಮಾತನಾಡಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ದುರ್ಬಲರು ಸಂಕಷ್ಟಪಡುವಂತಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರದ ಕಾರ್ಮಿಕರು ಹಾಗೂ ದುರ್ಬಲರು ಸಂಘಟನೆಯಲ್ಲಿ ತೊಡಗಿಕೊಂಡು, ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ನಮ್ಮ ಹಕ್ಕನ್ನು ಕೇಳುವ ಧೈರ್ಯ ಮಾಡಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಸಿಪಿಐ ಉಪ ಕಾರ್ಯದರ್ಶಿ ರಫಿಕ್, ಸಲಹೆಗಾರ ಶೇಷಪ್ಪ, ಕಟ್ಟಡ ಕಾರ್ಮಿಕ ಕಾರ್ಯದರ್ಶಿ ಕೃಷ್ಣ, ಸಿಪಿಐ ಸದಸ್ಯರಾದ ಗಣೇಶ್, ಮಂಜುನಾಥ್, ಕುಸುಮಾವತಿ, ರಮೇಶ್, ಸೋಮು ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net