

ಶ್ರೀರಂಗಪಟ್ಟಣ : ಪಟ್ಟಣ ಹೊರವಲಯದ ಶ್ರೀ ಸತ್ಯಸಾಯಿ ಅನಾಥ ಆಶ್ರಮದಲ್ಲಿ ಗುರುವಾರ ಶ್ರೀ ಸತ್ಯಸಾಯಿ ಬಾಬಾ ಅವರ 98ನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದಲ್ಲಿನ ಸೇವಾ ಆಶ್ರಮದಲ್ಲಿ ಮುಂಜಾನೆಯಿಂದಲೂ ಶ್ರೀ ಸತ್ಯಬಾಬಾ ಅವರ ಅಮೃತಶಿಲೆಯ ವಿಗ್ರಹಕ್ಕೆ ವಿವಿಧ ಬಗೆಯ ವಿಶೇಷ ಹೂವಿನ ಅಲಂಕಾರ ನೆರವೇರಿಸಿ ವಿಭೂತಿ ಸೇವೆಯೊಂದಿಗೆ ಭಕ್ತರು ಭಜನಾ ಗೀತೆಗಳನ್ನು ಹಾಡಿ ಪೂಜೆ ಸಲ್ಲಿಸಿದರು.
ಆಶ್ರಮದ ಮುಖ್ಯಸ್ಥ ಸಾಯಿಕುಮಾರ್ ಅವರು ಶ್ರೀ ಸತ್ಯಸಾಯಿ ಬಾಬಾ ಅವರ 98ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ಕಾವೇರಿ ಪ್ರೌಢಶಾಲೆಯ 62 ಹಾಗೂ ಸರ್ಕಾರಿ ಶಾಲೆಯ 36 ಒಟ್ಟು 98 ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಒಂದು ವರ್ಷದ ಶಾಲಾ ಶುಲ್ಕ ಹಾಗೂ ಶಿಕ್ಷಣಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ನೀಡಿದ್ದು, ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಈ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಸತ್ಯಸಾಯಿ ಬಾಬಾ ಅವರ ಜಯಂತ್ಯುತ್ಸವ ಪ್ರಯುಕ್ತ ಬಡ ವಿದ್ಯಾರ್ಥಿಗಳಿಗೆ ಬೇಕಾದ ಶಿಕ್ಷಣದ ಅಗತ್ಯತೆಯನ್ನು ಪೂರೈಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಪ್ರತಿಯೊಂದು ಮಗುವು ಶಿಕ್ಷಣ ಪಡೆಯಲು ಅರ್ಹರಾಗಿದ್ದು, ಎಲ್ಲ ಮಕ್ಕಳು ವಿದ್ಯಾವಂತರಾಗಿ ಸಮಾಜದ ಏಳ್ಗೆ ಮತ್ತು ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುವಂತಾಗಲಿ ಎಂದು ಅವರು ಹಾರೈಸಿದರು.
ಡಾ.ಸಾಯಿ ವೀರು, ಪುರಸಭಾ ಸದಸ್ಯರಾದ ಎಸ್.ಪ್ರಕಾಶ್, ಗಂಜಾಂ ಕೃಷ್ಣಪ್ಪ, ಪುರಸಭಾ ಮಾಜಿ ಸದಸ್ಯೆ ನಳಿನಾ ಸತ್ಯಪ್ಪ, ಕಸಾಪ ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ, ಹೋರಾಟಗಾರ್ತಿ ಶೀಲಾ ನಂಜುಂಡಯ್ಯ ಇತರರು ಉಪಸ್ಥಿತರಿದ್ದರು.