986 ಇಂಗುಗುಂಡಿ ನಿರ್ಮಿಸಿದ ಬೆಂಗಳೂರು ಜಲಮಂಡಳಿ; ಅಧಿಕ ಪ್ರಮಾಣದಲ್ಲಿ ಮಳೆನೀರು ಇಂಗಿಸಲು ಕ್ರಮ

BWSSB
Published on

ಬೆಂಗಳೂರು: ಅಂತರ್ಜಲ ಕುಸಿತದಿಂದ ಬತ್ತಿಹೋಗಿರುವ ಕೊಳವೆಬಾವಿಗಳಿಗೆ ಮರುಜೀವ ನೀಡುವ ಪ್ರಯತ್ನಕ್ಕೆ ಬೆಂಗಳೂರು ಜಲಮಂಡಳಿ ಮುಂದಾಗಿದ್ದು, ಮಳೆನೀರು ಇಂಗಿಸುವಿಕೆಯ ಭಾಗವಾಗಿ ಕಳೆದ 15 ದಿನಗಳ ಅವಧಿಯಲ್ಲಿ 986 ಇಂಗುಗುಂಡಿಗಳನ್ನು ನಿರ್ಮಿಸಿದೆ.

ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಸರಾಸರಿ 845 ಮಿಲಿಮೀಟರ್​ನಷ್ಟು ಮಳೆಯಾಗುತ್ತದೆ. ಆದರೆ, ಮಳೆ ನೀರೆಲ್ಲವೂ ಚರಂಡಿ ಸೇರುತ್ತಿದೆ. ಹೀಗೆ ಪೋಲಾಗುತ್ತಿರುವ ನೀರನ್ನು ತಡೆಯಲು ಜಲಮರುಪೂರಣಗೊಳಿಸಿದರೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ನೆಲೆಯಲ್ಲಿ ಜಲಮಂಡಳಿ ಕ್ರಮ ಕೈಗೊಂಡಿದೆ. "ಜಲಮಂಡಳಿಯಿಂದ ಮಳೆಗಾಲ ಆರಂಭಕ್ಕೂ ಮುನ್ನ 1 ಸಾವಿರ ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 986 ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ' ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಮಾಹಿತಿ ನೀಡಿದ್ದಾರೆ.

ಜಲಮಂಡಳಿ ವ್ಯಾಪ್ತಿಯಲ್ಲಿ ಬತ್ತಿಹೋಗಿರುವ ಕೊಳವೆಬಾವಿಗಳ ಪಕ್ಕದಲ್ಲಿ 12 ಅಡಿ ಆಳ ಹಾಗೂ 3 ಅಡಿ ಅಗಲ ಅಳತೆಯಲ್ಲಿ ಗುಂಡಿ ತೋಡಲಾಗುತ್ತಿದೆ. ಬಳಿಕ ಸಿಮೆಂಟ್​ ರಿಂಗ್​ಗಳನ್ನು ಅಳವಡಿಸಿ, ಸುತ್ತಲೂ ಜಲ್ಲಿ ಕಲ್ಲುಗಳನ್ನು ಹಾಕಿ ಕ್ರಮಬದ್ಧವಾಗಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದಿದ್ದಾರೆ.

ಸಾಮೂಹಿಕ ಮಳೆನೀರು ಕೊಯ್ಲು

ಜಲಮಂಡಳಿ ವ್ಯಾಪ್ತಿಯಲ್ಲಿ ಬತ್ತಿಹೋಗಿರುವ ಕೊಳವೆಬಾವಿಗಳಿಗೆ ಮಳೆ ನೀರು ಮರುಪೂರಣಕ್ಕೆ ಆದ್ಯತೆ ನೀಡಿದ್ದೇವೆ. ಜತೆಗೆ ವಿವಿಧ ಬಡಾವಣೆ, ಅಪಾರ್ಟ್​ಮೆಂಟ್​ ಸೇರಿದ 74 ಜಾಗಗಳಲ್ಲಿ ಸಾಮೂಹಿಕವಾಗಿ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಲಾಗಿದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆನೀರು ಇಂಗಲಿದೆ. ಇದರಿಂದ ಬತ್ತಿರುವ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಲಭ್ಯವಾಗುವ ವಿಶ್ವಾಸವಿದೆ ಎಂದು ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net