

ತಿ.ನರಸೀಪುರ: ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023-24 ನೇ ಆರ್ಥಿಕ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ 65 ಲಕ್ಷ ರೂ. ಹಾಗೂ 15ನೇ ಹಣಕಾಸಿನಲ್ಲಿ 32 ಲಕ್ಷ ರೂ.ಗಳನ್ನು ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪಿ.ಕೆಂಪೇಗೌಡ ಹೇಳಿದರು.
ತಾಲೂಕಿನ ಬಿ.ಶೆಟ್ಟಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ 1 ನೇ ಅವಧಿಯ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಮಾತನಾಡಿ, ನರೇಗಾದಡಿ 107 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗೆ ತಲಾ 4 , ಸಾಮಾಜಿಕ ಅರಣ್ಯ 25 ಕಾಮಗಾರಿಗಳನ್ನು ಕೆರೆಯ ಹೂಳು ತೆಗೆಸಲು ಆಯ್ಕೆ ಮಾಡಲಾಗಿದೆ. ಇನ್ನುಳಿದವು ವೈಯಕ್ತಿಕ ಕಾಮಗಾರಿಗಳು ಆಗಿವೆ ಎಂದು ಮಾಹಿತಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೂ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಅಭಿವೃದ್ಧಿಪಡಿಸುವುದು ಗ್ರಾ.ಪಂ. ಜವಾಬ್ದಾರಿಯಾಗಿದ್ದು, ಸರ್ಕಾರ ಪಂಚಾಯಿತಿಗೆ ನೀಡುವ ಅನುದಾನದ ಮಿತಿಯೊಳಗೆ ಯೋಜನೆಗಳನ್ನು ರೂಪಿಸಲಾಗುತ್ತದೆ. ಮಾಡಿರುವ ಅಭಿವೃದ್ಧಿಯ ಕಾಮಗಾರಿಗಳ ಬಗ್ಗೆ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಶಿಕ್ಷಕರು ಹಾಗೂ ಕಾರ್ಯಕರ್ತರು ಸ್ಥಳೀಯ ಮುಖಂಡರಿಗೆ ತಿಳಿಸಬೇಕು. 15ನೇ ಹಣಕಾಸಿನ ಅಗತ್ಯ ಅರಿತು ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸನ್ನ ಮಾತನಾಡಿ, ತಲಕಾಡು ಹೋಬಳಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗೆ ಕಾವೇರಿ ನೀರಾವರಿ ನಿಗಮ ಮತ್ತು ಏತ ನೀರಾವರಿ ಯೋಜನೆಗಳ ಇಂಜಿನಿಯರ್‌ಗಳು ಕಡ್ಡಾಯವಾಗಿ ಭಾಗವಹಿಸಿ, ಈ ಭಾಗದ ನೀರಾವರಿ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕ್ರಮಗಳನ್ನು ತಿಳಿಸಬೇಕು. ಈ ಬಗ್ಗೆ ಪಂಚಾಯಿತಿಯಲ್ಲಿ ನಿರ್ಣಯ ತೆಗೆದುಕೊಂಡು ಜಿಲ್ಲಾ ಪಂಚಾಯಿತಿ ಸಿಇಒಗೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧಿ ನರೇಗಾ ಲೆಕ್ಕ ಪರಿಶೋಧಕ ರಂಗರಾಜು ಅವರು ಯೋಜನೆ ಕಾಮಗಾರಿಗಳ ವಿವರವನ್ನು ಸಭೆಗೆ ಮಂಡಿಸಿದರು. ಅಧ್ಯಕ್ಷ ಎಂ.ಪುಟ್ಟಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದಕ್ಷಿಣ ಮೂರ್ತಿ, ಸದಸ್ಯರಾದ ಶ್ರೀನಿವಾಸಮೂರ್ತಿ, ಕೆ.ಎಂ. ಕುಮಾರ, ಉಮಾಪತಿ, ಶಿವಶಂಕರ್, ನೀಲಯ್ಯ, ನಂಜಮ್ಮಣಿ, ಚಿಕ್ಕನಾಗಮ್ಮ, ಉದ್ಯೋಗ ಖಾತ್ರಿ ಸಹಾಯಕ ಇಂಜಿನಿಯರ್ ಲೋಕೇಶ್, ಎಫ್‌ಡಿಎ ವಿಶ್ವನಾಥ್, ಡಾಟಾ ಎಂಟ್ರಿ ಆಪರೇಟರ್ ಪ್ರಕಾಶ್, ಮುಖಂಡ ಶಂಭುಲಿಂಗ ಇತರರು ಇದ್ದರು.