

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತ ಮೂವರು ಭಾನುವಾರ ಮೃತಪಟ್ಟಿದ್ದಾರೆ. ಇದರಿಂದ ಕರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ.
ಮೃತಪಟ್ಟವರಲ್ಲಿ ಸುರತ್ಕಲ್‌ನ ಇಡ್ಯಾ ನಿವಾಸಿ 31 ವರ್ಷದ ಯುವಕ ಅಸ್ತಮಾ, ಹೈಪರ್‌ಥೈರಾಯ್ಡಿಸಂ, ಅಧಿಕ ತೂಕ ಹಾಗೂ ತೀವ್ರ ನ್ಯುಮೋನಿಯಾದಿಂದ ಬಳಲುತ್ತಿದ್ದರು. 26ರಂದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಂಟ್ವಾಳ ತಾಲೂಕಿನ 48 ವರ್ಷದ ಮಹಿಳೆ ಸಾರಿ ಪ್ರಕರಣದಡಿ 27ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗಿಲ್ಲ. ಜೋಕಟ್ಟೆಯ 51 ವರ್ಷದ ಮಹಿಳೆ ಸಾರಿ ಪ್ರಕರಣದಡಿ 26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೃತಪಟ್ಟ ಮೂವರಲ್ಲೂ ಕರೊನಾ ಸೋಂಕು ದೃಢಪಟ್ಟಿದೆ. 6 ಮಂದಿ ಗುಣವಾಗಿ ಬಿಡುಗಡೆಯಾಗಿದ್ದಾರೆ.
ಒಂದೇ ದಿನ 97 ಮಂದಿಗೆ ಸೋಂಕು!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಪ್ರಥಮ ಬಾರಿಗೆ ಶತಕದ ಗಡಿ ಸಮೀಪಿಸಿದೆ. ಭಾನುವಾರ ದಾಖಲಾದ 97 ಹೊಸ ಪ್ರಕರಣ ಈವರೆಗೆ ಜಿಲ್ಲೆಯಲ್ಲಿ ಒಂದೇ ದಿನ ದಾಖಲಾದ ಗರಿಷ್ಠ ಸಂಖ್ಯೆ. ಕರೊನಾ ಸೋಂಕಿತರಲ್ಲಿ 32 ಮಂದಿ ಸೌದಿ ಅರೇಬಿಯಾ, ಕತಾರ್ ಮತ್ತು ಮುಂಬೈಯಿಂದ ಆಗಮಿಸಿದವರು. 21 ಮಂದಿ ಐಎಲ್‌ಐ, ಐದು ಸಾರಿ ಪ್ರಕರಣ. 28 ಜನರ ಪ್ರಾಥಮಿಕ ಸಂಪರ್ಕ ಇನ್ನೂ ತಿಳಿದಿಲ್ಲ. 10 ಮಂದಿ ಪ್ರಾಥಮಿಕ ಸಂಪರ್ಕ ಉಳ್ಳವರು.
ಮೂವರು ಕರೊನಾ ಸೇನಾನಿಗಳಿಗೆ ಸೋಂಕು
ಕರೊನಾ ಸೇನಾನಿಗಳಾದ ಇಬ್ಬರು ವೈದ್ಯರು ಹಾಗೂ ಓರ್ವ ವೈದ್ಯಕೀಯ ವಿದ್ಯಾರ್ಥಿಗೆ ಭಾನುವಾರ ಕರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿಗೆ ಒಳಗಾದ ವೈದ್ಯರ ಸಂಖ್ಯೆ ಒಂಬತ್ತಕ್ಕೆ ತಲುಪಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ನಾಲ್ವರ ಸ್ಥಿತಿ ಇನ್ನೂ ಗಂಭೀರವಿದ್ದು, ಅವರು ಸಕ್ಕರೆ ಕಾಯಿಲೆ, ನ್ಯುಮೋನಿಯಾ, ಹೃದ್ರೋಗ, ರಕ್ತದೊತ್ತಡ, ಪಾರ್ಕಿನ್ಸನ್ ಮುಂತಾದ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ 59 ವರ್ಷದ ಓರ್ವ ವ್ಯಕ್ತಿ ತುಸು ಚೇತರಿಸಿಕೊಂಡಿದ್ದು, ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಮನಪಾ ಪ್ರವೇಶ ಒಂದು ವಾರ ನಿರ್ಬಂಧ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಸೀಲ್‌ಡೌನ್ ಆಗಿರುವ ಪ್ರದೇಶಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪಾಲಿಕೆಗೆ ಸಾರ್ವಜನಿಕರ ಪ್ರವೇಶವನ್ನು ಸದ್ಯ ಒಂದು ವಾರದ ಮಟ್ಟಿಗೆ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಪಾಲಿಕೆಯಲ್ಲಿ ನೌಕರರು ಇದ್ದು, ಕಟ್ಟಡವನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಕಚೇರಿ ಸಿಬ್ಬಂದಿಯೊಬ್ಬರ ಪುತ್ರಿಗೆ ಸೋಂಕು ಬಂದಿರುವುದಾಗಿ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ವಿಸ್ತರಣೆ ಮಾಡುವ ಯೋಚನೆಯೂ ಪಾಲಿಕೆ ಮುಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ತಲವಾರು ದಾಳಿ ಆರೋಪಿಗೂ ಕರೊನಾ
ಉಳ್ಳಾಲ: ಕರೊನಾದಿಂದ ನಲುಗಿರುವ ಉಳ್ಳಾಲದಲ್ಲಿ ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಓರ್ವ ತಲವಾರಿನಿಂದ ದಾಳಿ ನಡೆಸಿದ ಆರೋಪಿ ಎಂದು ಗೊತ್ತಾಗಿದೆ.
ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಜನರಲ್ಲಿ ಆತಂಕ ದ್ವಿಗುಣಗೊಂಡಿದೆ. ಸ್ವಾಗತಗಾರ್ತಿಯಾಗಿದ್ದ ಕುಂಪಲದ ಮಹಿಳೆಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತೊಕ್ಕೊಟ್ಟಿನ ಪಾಲಿ ಕ್ಲಿನಿಕ್ ಮುಚ್ಚಲಾಗಿದೆ. ಇಲ್ಲಿ ಕೆಲಸ ಮಾಡುವ 23 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಉಳ್ಳಾಲ ಕೋಟೆಪುರದಲ್ಲಿ ಮಹಿಳೆಗೆ ಪಾಸಿಟಿವ್ ವರದಿ ಬಂದಿದೆ. ಅಲೇಕಳದ ಯುವಕನಿಗೂ ಸೋಂಕು ದೃಢಪಟ್ಟಿದ್ದು, ಈತ ಕಳೆದ ವಾರ ತೊಕ್ಕೊಟ್ಟು ಒಳಪೇಟೆಯಲ್ಲಿ ಮಾಂಸ ವ್ಯಾಪಾರಿಯನ್ನು ತಲವಾರಿನಿಂದ ಹಲ್ಲೆ ಮಾಡಿದ ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.
ಇಂದು ಸರ್ವಧರ್ಮ ಸಭೆ: ಉಳ್ಳಾಲದಲ್ಲಿ ಕರೊನಾ ಪ್ರಕರಣಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸೋಮವಾರ ಸಂಜೆ 4 ಗಂಟೆಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ಸರ್ವಧರ್ಮ ಸಭೆ ಕರೆಯಲಾಗಿದೆ ಎಂದು ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಕಾಸರಗೋಡಲ್ಲಿ 6 ಮಂದಿಗೆ ಪಾಸಿಟಿವ್
ಕಾಸರಗೋಡು: ಜಿಲ್ಲೆಯ 6 ಮಂದಿ ಸಹಿತ ಕೇರಳದಲ್ಲಿ ಭಾನುವಾರ 118 ಮಂದಿಯಲ್ಲಿ ಕೋವಿಡ್-19 ರೋಗಬಾಧೆ ಕಾಣಿಸಿಕೊಂಡಿದೆ. ಇವರಲ್ಲಿ 68 ಮಂದಿ ವಿದೇಶದಿಂದ ಹಾಗೂ 36 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಒಟ್ಟು 14 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಬಂಟ್ವಾಳದಲ್ಲಿ 4ನೇ ಸಾವು ಪ್ರಕರಣ
ಬಂಟ್ವಾಳ: ತಾಲೂಕಿನಲ್ಲಿ ಮೂವರು ಕರೊನಾದಿಂದಾಗಿ ಈಗಾಗಲೇ ಮೃತಪಟ್ಟಿದ್ದು, ಲೊರೆಟ್ಟೋದ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದಂತಾಗಿದೆ. ಮೃತಪಟ್ಟವರೆಲ್ಲರೂ ಮಹಿಳೆಯರೇ ಆಗಿದ್ದಾರೆ. ಕರೊನಾ ಬಾಧಿಸಿ ಮಹಿಳೆಯೋರ್ವರು ಭಾನುವಾರ ಮೃತಪಟ್ಟಿದ್ದು, ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮಹಿಳೆಯ ಪ್ರಾಥಮಿಕ ಸಂಪರ್ಕದ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಮಹಿಳೆಯ ಮೃತದೇಹವನ್ನು ಭಾನುವಾರ ಸ್ಥಳೀಯ ಮಸೀದಿಯ ಕಬರಸ್ಥಾನದಲ್ಲಿ ದಫನ ಮಾಡಲಾಯಿತು.