

ಕುಶಾಲನಗರ: ಕೂಲಿಕಾರರು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರೋಗ್ಯವಾಗಿರಲು ಸರ್ಕಾರ ಆರೋಗ್ಯ ತಪಾಸಣಾ ಶಿಬಿರಗಳನ್ನು ಅಯೋಜಿಸುತ್ತದೆ ಎಂದು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹೇಳಿದರು.
ಶಿರಂಗಾಲ ಗ್ರಾಮ ಪಂಚಾಯಿತಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಆರೋಗ್ಯ ತಪಾಸಣೆಗಾಗಿ ಇತ್ತೀಚೆಗೆ ಕೊಡಗಿನ ಗಡಿಭಾಗ ಶಿರಂಗಾಲ ಗೇಟ್ ಸಮೀಪ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಕಾರರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವುದಿಲ್ಲವೆಂದು ಅರಿತ ಸರ್ಕಾರ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದೆ. ಸಾರ್ವಜನಿಕರು ಆರೋಗ್ಯವಂತರಾಗಿರಲು ಇಂತಹ ಯೋಜನೆಗಳು ಸಹಕಾರಿಯಾಗುತ್ತವೆ. ಇದರಿಂದಾಗಿ ಜನರಿಗೆ ಉತ್ತಮ ಬದುಕು ಸಾಗಿಸಲು ಅನುಕೂಲವಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ ಮಾತನಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಹೇಮಲತಾ, ಕಾರ್ಯದರ್ಶಿ ಕೆ.ಸಿ. ರವಿ ಇದ್ದರು. ಗ್ರಾಮದ 96 ಕೂಲಿಕಾರರು ತಪಾಸಣೆಗೆ ಒಳಗಾದರು.