

ಚನ್ನರಾಯಪಟ್ಟಣ: ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿನ ಕೊಠಡಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಬಾರ್ಡ್ ವತಿಯಿಂದ 96 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆ ಗ್ರಾಮದ ನಾಗಮ್ಮ ಶ್ರೀಕಂಠಯ್ಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಟ್ಟು 6 ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಅಲ್ಲದೆ, ಶಿಥಿಲಗೊಂಡಿರುವ ಎರಡು ಶೌಚಗೃಹಗಳನ್ನು ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡಲಾಗುವುದು ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ಉಪನ್ಯಾಸಕರಾದ ಅಶೋಕ್, ಪೂರ್ಣಚಂದ್ರ, ವೇಣು ಗೋಪಾಲ್, ಪ್ರೌಢಶಾಲೆ ಸಹಶಿಕ್ಷಕರಾದ ವೆಂಕಟೇಶ್, ಸುಂದರೇಶ್ ಇತರರು ಹಾಜರಿದ್ದರು.