ಗಾಂಜಾ ಮಾರಾಟಗಾರನಿಂದ 96.50 ಲಕ್ಷ ರೂ. ನಗದು ಜಪ್ತಿ

h31-Police 1
Published on


ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದ ಹೋಟೆಲೊಂದರ ಬಳಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ರಾಜಸ್ತಾನ ಮೂಲದ ವ್ಯಕ್ತಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಖಚಿತ ಮಾಹಿತಿ ಮೇರೆಗೆ ದಕ್ಷಿಣ ಎಸಿಪಿ ಯು.ಬಿ. ಚಿಕ್ಕಮಠ ನೇತೃತ್ವದಲ್ಲಿ ಶಹರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮಹ್ಮದ್ ರಫಿಕ್ ತಹಸೀಲ್ದಾರ್, ಪಿಎಸ್‌ಐ ಮಾರುತಿ ಅವರನ್ನೊಳಗೊಂಡ ತಂಡ ದಾಳಿ ಮಾಡಿ ಬಂಧಿಸಿದ್ದಾರೆ ಎಂದರು.
ರಾಜಸ್ತಾನ ಮೂಲದ ಓಂಪ್ರಕಾಶ ವೀರಮಾರಾಮ ಎಂಬಾತನನ್ನು ಬಂಧಿಸಿ, ಆತನಿಂದ 85,000 ರೂ. ಮೌಲ್ಯದ 888 ಗ್ರಾಂ ಗಾಂಜಾ, 9 ಲಕ್ಷ ರೂ. ಮೌಲ್ಯದ ಕಿಯಾ ಸೋನೆಟ್ ಕಾರು, 50,000 ರೂ. ಮೌಲ್ಯದ ಒಂದು ಐಫೋನ್, ವಿವಿಧ ಬ್ಯಾಂಕಿನ 30 ಎಟಿಎಂ ಕಾರ್ಡ್, ವಿವಿಧ ಬ್ಯಾಂಕಿನ 36 ಚೆಕ್‌ಬುಕ್, 4 ಪಾಸ್ ಬುಕ್, 9 ಪಾನ್ ಕಾರ್ಡ್, 7 ವಿವಿಧ ರಬ್ಬರ್ ಸ್ಟಾಂಪ್, 6 ಸ್ಟಾಪಿಂಗ್ ಯಂತ್ರ ಹಾಗೂ 96,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಬಂಧಿತನಿಂದ 1,06,85,000 ರೂ. ಮೌಲ್ಯದ ಹಣ ಹಾಗೂ ವಿವಿಧ ಸಾಮಗ್ರಿ ದಸ್ತಗಿರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಸ್ಥಾನದಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ. ಗೋವಾದಲ್ಲಿ ಗಾಂಜಾ ದಂಧೆಗಿಳಿಯಲು ಮೂರು ತಿಂಗಳು ತರಬೇತಿ ಪಡೆದಿದ್ದ ಎಂದು ತಿಳಿದು ಬಂದಿದೆ. ಕೇಶ್ವಾಪೂರ ವ್ಯಾಪ್ತಿಯಲ್ಲಿ 6 ತಿಂಗಳಿಂದ ವಾಸವಾಗಿದ್ದ. ಯಾವುದೇ ಕೆಲಸದಲ್ಲಿ ತೊಡಗಿರಲಿಲ್ಲ. ಈತನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಗಾಂಜಾವನ್ನು ತನ್ನ ಗೆಳೆಯ ರಾಜಸ್ತಾನ ಮೂಲದ ಅಶೋಕಕುಮಾರ ಎಂಬಾತನಿಂದ ತಂದಿರುವುದಾಗಿ ಹೇಳಿದ್ದಾನೆ. ನಕಲಿ ದಾಖಲಾತಿಗಳನ್ನು ಬಳಸಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ತೆರೆದಿರುವುದಾಗಿ ತಿಳಿದು ಬಂದಿದೆ. ಇಷ್ಟೊಂದು ಪ್ರಮಾಣದಲ್ಲಿ ಹಣ ದೊರೆತಿರುವುದರಿಂದ ಐಟಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗುವುದು ಎಂದರಲ್ಲದೇ ಹುಬ್ಬಳ್ಳಿ ಶಹರ ಠಾಣೆ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾಂವಿ, ಎಸಿಪಿಗಳಾದ ಶಿವಪ್ರಕಾಶ ನಾಯಕ್, ಯು.ಬಿ. ಚಿಕ್ಕಮಠ, ಪಿಐ ಮಹ್ಮದ್ ರಫಿಕ್ ತಹಸೀಲ್ದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net