95 ಸಾವಿರ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಕ್ರಮ

KSOU 6 DEC 19
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ಸಮಸ್ಯೆಯಿಂದಾಗಿ 2013ರಿಂದ 2015ರ ವರೆಗಿನ 95 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಲಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು.


ವಿಶ್ವವಿದ್ಯಾಲಯದ ಕಲಿಕಾರ್ಥಿ ಕಲ್ಯಾಣ ಕೇಂದ್ರದ ವತಿಯಿಂದ ಮುಕ್ತ ಗಂಗೋತ್ರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಾರ್ಗದರ್ಶಿ’ ವಿದ್ಯಾರ್ಥಿ-ಅಧಿಕಾರಿಗಳ ನಡುವೆ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ(ಯುಜಿಸಿ) ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ರಾಜ್ಯ ಸರ್ಕಾರದಿಂದಲೂ ಕೇಂದ್ರಕ್ಕೆ ಪತ್ರ ವ್ಯವಹಾರ ಮಾಡಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಏಕಕಾಲದಲ್ಲಿ ಪರೀಕ್ಷೆ ಬರೆಯಲು ಸಮ್ಮತಿ ದೊರೆಯಬೇಕಾಗಿದೆ. ಆಗ ಮಾತ್ರ ಯುಜಿಸಿಯಿಂದ ಅನುಮತಿ ದೊರೆಯಲಿದೆ. ಬಳಿಕ ಪರೀಕ್ಷೆ ಬರೆಯಲು ಎಲ್ಲರಿಗೂ ಒಮ್ಮೆ ಅವಕಾಶ ನೀಡಿದರೆ ಸುಮಾರು 95 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.


13 ಆನ್‌ಲೈನ್ ಕೋರ್ಸ್ ಆರಂಭಿಸಲು ಅವಕಾಶ ದೊರೆತಿದೆ. ಸ್ನಾತಕೋತ್ತರ ಪದವಿಯ 3, ಸ್ನಾತಕ ಪದವಿಯ 10 ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.


51 ಕೋರ್ಸ್‌ಗಳಿಗೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 39 ಕೋರ್ಸ್‌ಗಳಿಗೆ ಅನುಮತಿ ದೊರೆತಿದೆ. ಉಳಿದ 12 ಕೋರ್ಸ್‌ಗಳನ್ನು ಪರಿಗಣನೆ ಮಾಡಿದ್ದು, ಅನುಮತಿ ಸಿಗುವ ನಿರೀಕ್ಷೆ ಇದೆ ಎಂದರು.


ಮುಕ್ತ ವಿವಿ ಮುಳುಗುತ್ತಿರುವ ಹಡಗೆಂದು ಬಹಳಷ್ಟು ಜನರು ಟೀಕಿಸಿದ್ದರು. ಆದರೆ, ಎಲ್ಲರ ಶ್ರಮದಿಂದ ವಿವಿಗೆ ನ್ಯಾಕ್ ಎ+ ಮಾನ್ಯತೆ ದೊರೆತಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯಾ ಜಿಲ್ಲೆಯಲ್ಲೇ ಪ್ರಾಯೋಗಿಕ, ಸಂಪರ್ಕ ತರಗತಿ ನಡೆಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಕಲಿಕಾರ್ಥಿ ಕಲ್ಯಾಣ ಕೇಂದ್ರ ಕಾರ್ಯನಿರ್ವಹಿಸಲಿದೆ. ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ, ಶೈಕ್ಷಣಿಕ ಸವಲತ್ತುಗಳ ಕುರಿತು ಮಾರ್ಗದರ್ಶನ ನೀಡಲಿದೆ. ಪ್ರತಿ ಸೋಮವಾರ ಅಧಿಕಾರಿಗಳೇ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ನಿರಂತರವಾಗಿ ಸಮನ್ವಯ ಸಾಧಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಅಧ್ಯಯನ ಕೇಂದ್ರದ ಡೀನ್ ಪ್ರೊ. ರಾಮನಾಥಂ ನಾಯ್ಡು, ಸಹಾಯಕ ಕುಲಸಚಿವೆ ದೀಪಾಶ್ರೀ, ಕೇಂದ್ರದ ಸಂಚಾಲಕ ಡಾ.ಸುಧಾಕರ್ ಹೊಸಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net