95 ನಿವೇಶನಗಳಿಗೆ ನಕಲಿ ಇ-ಖಾತೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಪಂ ಸದಸ್ಯರ ಒತ್ತಾಯ

harohalli 2
Published on

ಹಾರೋಹಳ್ಳಿ: ಹೋಬಳಿಯ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 95 ನಿವೇಶನಗಳಿಗೆ ನಕಲಿ ಇ-ಖಾತೆಗಳಾಗಿರುವುದು ಎಲ್ಲರಿಗೂ ತಿಳಿದಿದ್ದರೂ, ಈ ಖಾತೆಗಳು ತಯಾರಾಗಿದ್ದೆಲ್ಲಿ, ಸಿದ್ಧಪಡಿಸಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಕೊಟ್ಟಗಾಳು ಗ್ರಾಪಂನಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಜಗದೀಶ್, ದೇವರಾಜ್ ಜಾಧವ್ ಮತ್ತಿತರರು, 95 ಇ-ಖಾತೆಗಳು ನಕಲಿಯಾಗಿದ್ದು, ಪಿಡಿಒ ಸಹಿ ಕೂಡ ಇಲ್ಲ. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಡಿಮಾಂಡ್ ರಿಜಿಸ್ಟರ್ ಮಾಯ: ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹತ್ತಾರು ಹಳ್ಳಿಗಳ ಡಿಮ್ಯಾಂಡ್ ರಿಜಿಸ್ಟರ್‌ಗಳೇ ಪಂಚಾಯಿತಿ ಕಚೇರಿಯಿಂದ ಮಾಯವಾಗಿವೆ. 2000-2010ರವರೆಗೆ ಪಿಚ್ಚನಕೆರೆಯ ಡಿಮ್ಯಾಂಡ್ ರಿಜಿಸ್ಟರ್ ಇಲ್ಲ. ಇದಕ್ಕೆ ಹೊಣೆ ಯಾರು,  ಅವುಗಳೆಲ್ಲ ಎಲ್ಲಿ ಹೋದವು. ಪಂಚಾಯಿತಿಯಲ್ಲಿನ ಆಗು ಹೋಗುಗಳ ಬಗ್ಗೆ ಗಮನಹರಿಸಬೇಕು  ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸದಸ್ಯರು, ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಆಗ್ರಹಿಸಿದರು

ಗೊಲ್ಲಹಳ್ಳಿ ನಿವೇಶನಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಮೂಲ ಖಾತೆದಾರರಿಗೆ ಮೂರು ಬಾರಿ ನೋಟಿಸ್ ನೀಡಿದರೂ ಯಾರೂ ಕೂಡ ಸ್ಪಂದಿಸಿಲ್ಲ. ಆದ್ದರಿಂದ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಅಲ್ಲದೇ ದಾಸೇಗೌಡನದೊಡ್ಡಿಯಲ್ಲಿ ಹಲವಾರು ಇ-ಖಾತೆಗಳಾಗಿದ್ದು, ನಾನು ಮಾಡಿಲ್ಲ ಎಂದು ಅಲ್ಲಿನ ಕಾರ್ಯದರ್ಶಿ ಹೇಳುತ್ತಾರೆ. ಇದಕ್ಕೆ ಯಾರು ಹೊಣೆ ಎಂದು ಸದಸ್ಯರು ಪ್ರಶ್ನಿಸಿದರು. ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಇ-ಖಾತೆ ಹಗರಣ ನಡೆದಿದ್ದು, ಪಿಡಿಒ, ಇಒ ಅಥವಾ ಸಿಇಒ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಸದಸ್ಯರೆಲ್ಲ ಒಕ್ಕೊರಲಿನಿಂದ ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಪುಟ್ಟಮಣಿ ಪುಟ್ಟಸ್ವಾಮಿ, ಉಪಾಧ್ಯಕ್ಷ ನವೀನ್ ಕುಮಾರ್, ಪಿಡಿಒ ರಾಜೇಶ್ವರಿ, ಸದಸ್ಯರಾದ ದೇವುರಾಜ್ ಜಾಧವ್, ಪಿಚ್ಚನಕೆರೆ ಜಗದೀಶ್ ಹಾಗೂ ಇತರ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net