

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿ ಸೇರಿ 4,000 ಮನೆಗಳು ಸಂಪೂರ್ಣ ಬಿದ್ದು ಹೋಗಿರುವ ಮಾಹಿತಿ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದ್ದು ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕೂಡಲೇ 95 ಸಾವಿರ ಸೇರಿ ಒಟ್ಟು 5 ಲಕ್ಷ ರೂ. ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ವಿವಿಧ ಮಳೆಬಾಧಿತ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯಿಂದ ಸಂಪರ್ಕ ಕಡಿತಗೊಂಡಿರುವ ರಸ್ತೆ, ಸೇತುವೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದು ಸರ್ಕಾರದ ಮೊದಲನೇ ಆದ್ಯತೆಯಾಗಿದೆ. ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರವಾಗಿ ಪರಿಹಾರ ನೀಡಲಾಗುವುದು. ಅಲ್ಪ ಪ್ರಮಾಣದಲ್ಲಿ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ನೀಡಲು ಅವಕಾಶವಿದ್ದು, ನೀರು ನುಗ್ಗಿರುವ ಮನೆಗಳಿಗೆ 10 ಸಾವಿರ ರೂ. ಪರಿಹಾರ ಸಿಗಲಿದೆ ಎಂದರು. ಪ್ರಸ್ತುತ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ತೊಡಕಾಗುತ್ತಿದೆ ಎಂದರು.
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ದೊಡ್ಡ ಅನಾಹುತಗಳಾಗಿವೆ. ಸಾರ್ವಜನಿಕರ ಆಸ್ತಿ-ಪಾಸ್ತಿ ಹಾನಿಗೀಡಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನವನ್ನು 10 ದಿನಗಳ ಬದಲು 1 ತಿಂಗಳು ನಡೆಸಿ ಆ ಭಾಗದ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು.
| ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ