95.5 ಲಕ್ಷ ರೂ. ಉಳಿತಾಯ ಬಜೆಟ್

21 CRP 01
Published on

ಚನ್ನರಾಯಪಟ್ಟಣ: ಇಲ್ಲಿನ ಪುರಸಭೆಗೆ 2023-24ನೇ ಸಾಲಿಗೆ 95.5 ಲಕ್ಷ ರೂ. ಉಳಿತಾಯ ಬಜೆಟ್‌ಅನ್ನು ಅಧ್ಯಕ್ಷೆ ರೇಖಾ ಅನಿಲ್ ಮಂಗಳವಾರ ಮಂಡಿಸಿದರು.


ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಜೆಟ್ ಸಭೆಯಲ್ಲಿ ಆಯವ್ಯಯ ಮಂಡಿಸಿದ ಅವರು ಸರ್ಕಾರದ ವಿವಿಧ ಅನುದಾನಗಳು ಹಾಗೂ ಪುರಸಭೆ ಮೂಲಗಳಿಂದ ಬರುವ ಆದಾಯದ ಮಾಹಿತಿ ನೀಡಿದರು. ಅಸಾಮಾನ್ಯ ಜಮೆಗಳು ಮತ್ತು ಪ್ರಾರಂಭ ಶುಲ್ಕ ಸೇರಿದಂತೆ ನಿರೀಕ್ಷಿತ ರಾಜಸ್ವ ಖಾತೆ, ಬಂಡವಾಳ ಖಾತೆ ಹಾಗೂ ಅಸಾಮಾನ್ಯ ಖಾತೆಗಳ ಸಹಾಯದಿಂದ 53.64 ಕೋಟಿ ರೂ. ಜಮೆ ಆಗಲಿದೆ. ರಾಜಸ್ವ ಖಾತೆ ವೆಚ್ಚ, ಬಂಡವಾಳ ಖಾತೆ ವೆಚ್ಚ, ಅಸಾಮಾನ್ಯ ಖಾತೆ ವೆಚ್ಚಗಳಿಗಾಗಿ 52.69 ಕೋಟಿ ರೂ.ಗಳನ್ನು ವ್ಯಯಿಸಿ ಒಟ್ಟಾರೆ 95.9 ಲಕ್ಷ ರೂ.ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದರು.


ಇದೇ ವೇಳೆ ಕಳೆದ ಸಾಲಿನ 2022-23ನೇ ಸಾಲಿನ ಬಜೆಟ್‌ನ್ನು ಪರಿಶೀಲಿಸಿ ಅನುಮೋದನೆ ಪಡೆಯುವ ವೇಳೆ ನಾನ ನಿರ್ದೇಶನ ಸದಸ್ಯ ನಂಜುಂಡ ಮೈಮ್ ಕಳೆದ ಬಾರಿಯಲ್ಲಿ ಘೋಷಣೆಯಾದ ಕಾಮಗಾರಿಗಳಲ್ಲಿ ಎಷ್ಟು ಪೂರ್ಣಗೊಂಡಿವೆ ಎಂದು ಪ್ರಶ್ನಿಸಿದರು. ಶೇ.80 ಕಾಮಗಾರಿ ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರೂ ನಂಜುಂಡ ಅವರ ಒತ್ತಾಯದ ಮೇರೆಗೆ ಕಳೆದ ಸಾಲಿನ ಬಜೆಟ್‌ನ ಆಯ್ಯವ್ಯಯವನ್ನು ಸಭೆಯಲ್ಲಿ ಮಂಡಿಸಿ ಅರ್ಥೈಸಲಾಯಿತು. ಇಂದೇ ಸಾಮಾನ್ಯ ಸಭೆ ಕರೆಯಲಾಗಿದ್ದು, ಮುಂದುವರಿದಂತೆ ಸಾಮಾನ್ಯ ಸಭೆ ನಡೆಸಲು ಸದಸ್ಯರು ಒಪ್ಪಿಗೆ ನೀಡಬೇಕೆಂದು ಅಧ್ಯಕ್ಷರು ಕೋರಿದರು. ಆಗ ಆಡಳಿತ ಪಕ್ಷದ ಸದಸ್ಯ ಮೋಹನ್ ಸಭೆ ನಡೆಸಲು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರಿಂದ ಅಜೆಂಡಕ್ಕಾಗಿ ವಿಷಯಗಳನ್ನೇ ಪಡೆಯದೆ ಏಕಾಏಕಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಿಕ್ಕಷ್ಟೆ ಸಭೆ ಕರೆದಿರುವುದು ಸದಸ್ಯರ ಹಕ್ಕನ್ನು ಹತ್ತಿಕ್ಕುವ ಕೆಲಸವಾಗಲಿದೆ. ಸಭೆ ರದ್ದುಪಡಿಸುವಂತೆ ಆಗ್ರಹಿಸಿದರು.


ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಿ.ಎನ್. ಶಶಿಧರ್ ಅಧ್ಯಕ್ಷರ ವಾರ್ಡ್‌ಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಅಜೆಂಡಾದಲ್ಲಿ ತಂದಿದ್ದು ನಾವುಗಳು ಮಾಡಿದ ಪಾಪವಾದರೇನು? ನಾವು ನಮ್ಮ ಮನೆಗೆ ಲೈಟ್ ಹಾಗೂ ರಸ್ತೆ ಕೇಳುತ್ತಿಲ್ಲ. ಸಾರ್ವಜನಿಕರಿಗಾಗಿ ಕೇಳುತ್ತಿರುವುದು. ನಮ್ಮಿಂದ ವಿಷಯಗಳನ್ನು ಏಕೆ ಪಡೆದಿಲ್ಲ ಎಂದು ಅಧಿಕಾರಿಗಳನ್ನು ಕೇಳಿದರೆ, ಅಧ್ಯಕ್ಷರು ಯಾರಿಂದಲೂ ವಿಷಯ ಪಡೆಯುವುದು ಬೇಡ. ಹಳೆಯ ವಿಷಯಗಳೇ ಪುನಾರವರ್ತನೆಯಾಗುತ್ತವೆ ಎನ್ನುತ್ತಾರೆ, ನಾವುಗಳು ಸಭೆಗೆ ಬಿಸ್ಕೆಟ್ ತಿನ್ನಲು ಬರಬೇಕೆ? ಅಧ್ಯಕ್ಷರು ಹೊಸಬರು, ಅವರಿಗೆ ತಿಳಿದಿಲ್ಲ ಎನ್ನುವುದಾದರೆ ಮುಖ್ಯಾಧಿಕಾರಿ ಏನು ಮಾಡುತ್ತಿದ್ದಾರೆ. ನೀವೇ ಸದಸ್ಯರಾಗಲು ಹೊರಟಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು. ಅಂತಿಮವಾಗಿ ಕೆಲ ಸದಸ್ಯರು ಅಸಮಾನಿತರನ್ನು ಮನವೊಲಿಸಿ ಸಭೆ ನಡೆಯಲು ಅನುವು ಮಾಡಿಕೊಟ್ಟರು. ಸಭೆ ಮುಂದುವರಿದು ಬಜೆಟ್ ಮಂಡಣೆ ಮಾಡಲಾಯಿತು. ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net