94 ಮಂದಿಗೆ ಕರೊನಾ ಸೋಂಕು ; ತುಮಕೂರು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2603ಕ್ಕೆ ಏರಿಕೆ

Corna virus 16 April 20
Published on

ತುಮಕೂರು: ಜಿಲ್ಲೆಯಲ್ಲಿ ಭಾನುವಾರವೂ 94 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2603ಕ್ಕೆ ಏರಿದೆ.

ಸಾವಿನ ಸಂಖ್ಯೆಯೂ ಹೆಚ್ಚಳವಾಗಿದ್ದು ಭಾನುವಾರ ಒಂದೇ ದಿನ 5 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಆ.4ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ತುಮಕೂರು ನಗರದ ಕೋತಿತೋಪು ನಿವಾಸಿ 44 ವರ್ಷದ ವ್ಯಕ್ತಿ, ಸಿದ್ಧಗಂಗಾ ಬಡಾವಣೆಯ 60 ವರ್ಷದ ವ್ಯಕ್ತಿ, ಗಾಂಧಿನಗರದ 68 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಪಾವಗಡ ಪಟ್ಟಣದ ಮಹದೇವನಗರ ಬೀದಿಯ 52 ವರ್ಷದ ವ್ಯಕ್ತಿ ಹಾಗೂ ಶನಿವಾರವಷ್ಟೇ ಸೋಂಕು ದೃಢವಾಗಿದ್ದ ಶಿರಾ ನಗರದ ಕಚೇರಿ ಮಹೊಲ್ಲಾ ಬಡಾವಣೆಯ 72 ವರ್ಷದ ವ್ಯಕ್ತಿಯೂ ಬಲಿಯಾಗಿದ್ದಾರೆ. ತುಮಕೂರು ತಾಲೂಕಿನಲ್ಲಿ ಗರಿಷ್ಠ 30 ಸೋಂಕಿತರು ಪತ್ತೆಯಾಗಿದ್ದು, ಬಹುತೇಕರು ರೋಗಲಕ್ಷಣವಿಲ್ಲದಿರುವುದು ಗಮನಾರ್ಹ. ಪ್ರಾಥಮಿಕ ಸಂಪರ್ಕದಿಂದ 31, ದ್ವಿತೀಯ ಸಂಪರ್ಕದಿಂದ 15 ಮಂದಿ ಸೋಂಕಿಗೆ ಗುರಿಯಾಗಿದ್ದಾರೆ.

ಗುಬ್ಬಿ, ಪಾವಗಡ, ಶಿರಾ ಹಾಗೂ ತುಮಕೂರು ನಗರದಲ್ಲಿ ತಲಾ ಒಬ್ಬರು ಒಟ್ಟು 4 ಗರ್ಭಿಣಿಯರಿಗೆ ಸೋಂಕು ತಗುಲಿದೆ, 60 ವರ್ಷ ಮೇಲ್ಪಟ್ಟವರು 12 ಜನರಿದ್ದು ಯಾವುದೇ ಮಕ್ಕಳಿಲ್ಲದಿರುವುದು ಸಮಾಧಾನ ತಂದಿದೆ, 62 ಪುರುಷರು ಹಾಗೂ 52 ಮಹಿಳೆಯರಿದ್ದಾರೆ.

ಸೋಂಕಿನಿಂದ ಗುಣಮುಖರಾಗಿ 85 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 980 ಸಕ್ರಿಯ ಪ್ರಕರಣಗಳು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. 7 ರೋಗಿಗಳ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 46,072 ಜನರ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 40,200 ಜನರ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ಬಂದಿರುವ 2,603 ಜನರಲ್ಲಿ ಬಹುತೇಕರು ಗುಣಮುಖರಾಗಿದ್ದು, ಚಿಕಿತ್ಸೆಗೆ ತಡವಾಗಿ ಬಂದ ಕೆಲವರು ಸಾವನ್ನಪ್ಪಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗಿದ್ದು ಜನರು ಇದರ ಸದುಪಯೋಗ ಪಡೆಯಬಹುದು. ರೋಗ ಲಕ್ಷಣಗಳು ಕಾಣಿಸಿದ ಕೂಡಲೇ ಪರೀಕ್ಷೆಗೆ ಬರಬೇಕು ಎಂದು ಜಿಲ್ಲಾಡಳಿತ ನಾಗರಿಕರಲ್ಲಿ ಮನವಿ ಮಾಡಿದೆ.

ಲಾಬಿಗೆ ಮಣಿದ ಆರೋಗ್ಯ ಇಲಾಖೆ: ನಗರದ ಸದಾಶಿವನಗರ ಬಡಾವಣೆಯಲ್ಲಿ ಕರೊನಾ ಸೋಂಕಿಗೆ ಗುರಿಯಾದ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಮನೆಯಲ್ಲಿಯೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದ ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಯ ಮಗ ರಾಜಕೀಯ ಪುಡಾರಿಯಾಗಿದ್ದು ಸೋಂಕು ದೃಢಪಟ್ಟಾಗಲೂ ಮನೆ ಸೀಲ್‌ಡೌನ್ ಆಗದಂತೆ ನೋಡಿಕೊಂಡಿದ್ದ ಎನ್ನಲಾಗಿದೆ. ಆರೋಗ್ಯ ಇಲಾಖೆ ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಇನ್ನೊಂದು ನಿಯಮ ಮಾಡುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net