

ಹುಬ್ಬಳ್ಳಿ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಕೆರೆಗಳು ತುಂಬಿ ಹರಿಯುತ್ತಿದ್ದು, ಹುಬ್ಬಳ್ಳಿಯ ಉಣಕಲ್ಲ ಕೆರೆಯೂ ಶುಕ್ರವಾರದಂದು ಕೋಡಿ ತುಂಬಿ ಹರಿಯುತ್ತಿದೆ.
ಉಣಕಲ್ಲ ಕೆರೆ ಕೋಡಿ ವೀಕ್ಷಿಸಲು ಜನರು ಕುಟುಂಬ ಹಾಗೂ ಸ್ನೇಹಿತರ ಸಮೇತ ಭೇಟಿ ನೀಡುತ್ತಿದ್ದಾರೆ.
ಈ ಮಧ್ಯೆ ಧಾರವಾಡ ಜಿಲ್ಲೆಯಾದ್ಯಂತ ಜೂನ್ನಿಂದ ಇದುವರೆಗೆ ಸುರಿದ ಮಳೆಯಿಂದಾಗಿ 4 ಮನೆಗಳಿಗೆ ತೀವ್ರತರದ ಹಾನಿಯಾಗಿದ್ದು, 93 ಮನೆಗಳು ಭಾಗಶಃ ಬಿದ್ದಿವೆ.
ಇದರಲ್ಲಿ ಹುಬ್ಬಳ್ಳಿ ನಗರದಲ್ಲಿ 18 ಮನೆಗಳು ಭಾಗಶಃ ಬಿದ್ದಿರುವ ಬಗ್ಗೆ ವರದಿಯಾಗಿದೆ. ಮೇ ತಿಂಗಳಲ್ಲಿ ತಾರಿಹಾಳ ಗ್ರಾಮದ ನಿವಾಸಿಯೊಬ್ಬ ಸಿಡಿಲು ಬಡಿದು ಸಾವಿಗೀಡಾಗಿದ್ದು, ಆತನ ಕುಟುಂಬದವರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಿದೆ.
ಕಳೆದ ಎರಡು ದಿನಗಳಿಂದಂತೂ ಮಳೆ ಮತ್ತಷ್ಟು ಜೋರಾಗಿ ಸುರಿಯುತ್ತಿದೆ. ನಗರದ ಹೊರ ಭಾಗದ ಬಡಾವಣೆಗಳ ಮಣ್ಣಿನ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯಾರ್ಥಿಗಳು ರೇನಕೋಟ್ ಹಾಕಿಕೊಂಡು, ಕೊಡೆ ಹಿಡಿದು ಶಾಲಾ, ಕಾಲೇಜುಗಳಿಗೆ ಹೋಗುತ್ತಿದ್ದಾರೆ.