ತುಮಕೂರು ಜಿಲ್ಲೆಯಲ್ಲಿವೆ 1040 ಕರೊನಾ ಸಕ್ರಿಯ ಪ್ರಕರಣ ; ಕರೊನಾ ವೈರಸ್‌ಗೆ ವೃದ್ಧರೇ ಟಾರ್ಗೆಟ್

CORONA_KYATHSANDRA_PROBLM
Published on

ತುಮಕೂರು: ಶುಕ್ರವಾರ ಜಿಲ್ಲೆಯಲ್ಲಿ 92 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3211ಕ್ಕೇರಿದೆ. 67 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, 1040 ಸಕ್ರಿಯ ಪ್ರಕರಣಗಳಾಗಿವೆ.

ತುಮಕೂರು ತಾಲೂಕಿನಲ್ಲಿ 31, ಮಧುಗಿರಿ 10, ಪಾವಗಡ 9, ತಿಪಟೂರು 8, ಚಿ.ನಾ.ಹಳ್ಳಿ 6, ಕೊರಟಗೆರೆ 7, ತುರುವೇಕೆರೆ 5, ಶಿರಾ 3, ಗುಬ್ಬಿ 4, ಕುಣಿಗಲ್ 9 ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ.

ಕ್ಯಾತಸಂದ್ರ ಟ್ರಕ್ ಟರ್ಮಿನಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 40 ಜನ ಕರೊನಾ ಸೋಂಕಿತರು ಅಲ್ಲಿನ ಅವ್ಯವಸ್ಥೆ ಬಯಲುಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಹಳೆಯ ರೋಗಿಗಳ ಜತೆಗೆ ಹೊಸ ಸೋಂಕಿತರನ್ನು ಇಲ್ಲಿಗೆ ಕರೆತಂದು ಬಿಡಲಾಗುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದರೆ ಪೊಲೀಸರು ಲಾಠಿ ತೋರಿಸಿ ಹೆದರಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಶುಕ್ರವಾರ ಪಾವಗಡ ತಾಲೂಕು ವೈ.ಎನ್.ಹೊಸಕೋಟೆಯ 64 ವರ್ಷದ ಮಹಿಳೆ, ಕುಣಿಗಲ್ ತಾಲೂಕಿನ ಹೊಸಪಾಳ್ಯದ 67 ವರ್ಷದ ವೃದ್ಧ, ತುಮಕೂರಿನ ಎಸ್.ಎಸ್.ಪುರಂನ 52 ವರ್ಷದ ವ್ಯಕ್ತಿ ಹಾಗೂ ತಿಪಟೂರಿನ ಗೋವಿನಪುರದ 55 ವರ್ಷದ ವ್ಯಕ್ತಿ ಸೇರಿ ಒಟ್ಟು 4 ಜನ ಬಲಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ 96ಕ್ಕೇರಿದೆ, ತೀವ್ರ ತೊಂದರೆ ಅನುಭವಿಸುತ್ತಿರುವ 13 ಜನರು ಜಿಲ್ಲಾ ಕೋವಿಡ್ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗುವ ಆತಂಕವಿದೆ.

17ಕ್ಕೆ ಸಿದ್ಧಗಂಗಾ ಸಾರಿಗೆ ಆರಂಭ: ಕರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ನಿಲ್ಲಿಸಲಾಗಿದ್ದ ತುಮಕೂರು ನಗರದ ‘ಸಿದ್ಧಗಂಗಾ ಸಾರಿಗೆ’ ಆ.17ರಿಂದ ಪುನರಾರಂಭವಾಗಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ತಿಳಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ತುಮಕೂರು ಬಸ್ ನಿಲ್ದಾಣದಿಂದ ಸಿದ್ಧಗಂಗಾಮಠ-ಹೆಗ್ಗೆರೆ, ಶೆಟ್ಟಿಹಳ್ಳಿ-ಎಲ್ಲಾಪುರ, ಗೂಳರಿವೆ-ಯಲ್ಲಾಪುರ, ಮೇಳೇಕೋಟೆ-ಬೆಳಗುಂಬ, ಊರುಕೆರೆ-ಮರಳೂರುದಿಣ್ಣೆ ನಗರ ಸಾರಿಗೆಗಳನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಬೆಳಗ್ಗೆ 6 ರಿಂದ ರಾತ್ರಿ 9ರ ವರೆಗೆ ನಗರ ಸಾರಿಗೆ ಬಸ್ ಸಂಚಾರ ನಡೆಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net