

ಆರ್.ಕೃಷ್ಣ ಮೈಸೂರು
ಲೋಕಸಭಾ ಚುನಾವಣೆಯ ಒತ್ತಡದ ನಡುವೆಯೂ ಮೈಸೂರು ನಗರಪಾಲಿಕೆ ಕಂದಾಯ ವಸೂಲಿಯಲ್ಲಿ ಸಾಧನೆ ಮಾಡಿದೆ.
ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ನೀಡುವ ವಿಶೇಷ ಶೇ.5ರಷ್ಟು ರಿಯಾಯಿತಿಗೆ ತೆರಿಗೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದೇ ತಿಂಗಳಲ್ಲಿ 92 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
ಆಸ್ತಿ ತೆರಿಗೆ ಪ್ರಮಾಣ ಹೆಚ್ಚಳದ ನಡುವೆಯೂ ತೆರಿಗೆದಾರರು ನಗರ ಪಾಲಿಕೆಗೆ ಖುದ್ದಾಗಿ ಅಥವಾ ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಿ ಸ್ಪಂದನೆ ತೋರಿದ್ದಾರೆ. 2024-25ನೇ ಸಾಲಿನಲ್ಲಿ 220 ಕೋಟಿ ರೂ. ಸಂಗ್ರಹ ಗುರಿ ಹೊಂದಿದ್ದ ಪಾಲಿಕೆಯೂ ಕೇವಲ ಒಂದು ತಿಂಗಳಲ್ಲಿ ಬರೋಬ್ಬರಿ 92.24 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಈ ಮೂಲಕ ಶೇ.40ರಷ್ಟು ಸಾಧನೆ ಮಾಡಿದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 7.81 ಕೋಟಿ ರೂ. ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ.
ಸಾರ್ವಜನಿಕರೇ ತೆರಿಗೆ ಪಾವತಿಸಲು ಮುಂದಾಗಿರುವುದರಿಂದ ಪಾಲಿಕೆ ಆದಾಯ ವೃದ್ಧಿಯಾಗಿದೆ. ಚುನಾವಣೆ ಇದ್ದುದ್ದರಿಂದ ಆಸ್ತಿ ತೆರಿಗೆ ಪಾವತಿಗೆ ಇದ್ದ ಶೇ.5ರಷ್ಟು ರಿಯಾಯಿತಿಯನ್ನು ವಿಸ್ತರಣೆ ಮಾಡಬೇಕು ಎಂದು ಮೈಸೂರು ನಗರದ ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಸಂದೇಶ್‌ಸ್ವಾಮಿ ಸೇರಿದಂತೆ ಹಲವು ಪಾಲಿಕೆ ಮಾಜಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದರು. ರಿಯಾಯಿತಿಯನ್ನು ವಿಸ್ತರಿಸಿದರೆ ಇನ್ನಷ್ಟು ತೆರಿಗೆ ಸಂಗ್ರಹಕ್ಕೆ ಅನುಕೂಲವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ತೆರಿಗೆ ಪಾವತಿಯ ಸಂಖ್ಯೆ ಕಡಿಮೆ ಇದ್ದು, ಆಸ್ತಿ ತೆರಿಗೆಯಲ್ಲಿ ಶೇ. 25ರಿಂದ 30ರಷ್ಟು ಹೆಚ್ಚಳವಾಗಿರುವುದರಿಂದ ಕಳೆದ ಬಾರಿಗಿಂತ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಮನೆಯೊಂದಕ್ಕೆ ಕಳೆದ ಬಾರಿ 4,900 ರೂ. ತೆರಿಗೆ ಪಾವತಿಸಿದ್ದ ಗ್ರಾಹಕರೊಬ್ಬರು ಈ ಬಾರಿ 7,228 ರೂ. ತೆರಿಗೆ ಪಾವತಿ ಮಾಡಿದ್ದಾರೆ.
2023ರ ಏಪ್ರಿಲ್ ತಿಂಗಳಲ್ಲಿಯೂ ಇದೇ ಮಾದರಿಯಲ್ಲಿ ಶೇ.5ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದರಿಂದ 84.42 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. 2023- 24ನೇ ಸಾಲಿನಲ್ಲಿ 182 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿದ್ದ ಪಾಲಿಕೆಯು ಕೇವಲ ಒಂದು ತಿಂಗಳಲ್ಲಿ 84.42 ಕೋಟಿ ರೂ. ಸಂಗ್ರಹಿಸಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ತೆರಿಗೆ ಪಾವತಿಯ ಸಂಖ್ಯೆ ಕಡಿಮೆಯಾದರೂ 7 ಕೋಟಿ ರೂ. ಗಿಂತ ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2023ರಲ್ಲಿ 84.42 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. 2024 ರಲ್ಲಿ 92.24 ಕೋಟಿ ರೂ. ಸಂಗ್ರಹವಾಗಿದೆ.
ಕೋಟ್…
ಹಲವು ವರ್ಷಗಳಿಂದ ಆರ್ಥಿಕ ವರ್ಷದ ಏಪ್ರಿಲ್‌ನಲ್ಲಿ ಶೇ.5ರಷ್ಟು ರಿಯಾಯಿತಿ ನೀಡುತ್ತಾ ಬರುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ತೋರುತ್ತಿದ್ದಾರೆ. ಈ ವರ್ಷ ಆಸ್ತಿ ತೆರಿಗೆ ಏರಿಕೆ ಆಗಿರುವುದರಿಂದ ಹಿಂದಿನ ವರ್ಷಕ್ಕಿಂತ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ರಿಯಾಯಿತಿ ವಿಸ್ತರಣೆ ವಿಷಯ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು.
ಡಾ.ಎನ್.ಎನ್.ಮಧು, ಆಯುಕ್ತರು, ಮೈಸೂರು ನಗರ ಪಾಲಿಕೆ
2024ರಲ್ಲಿ ತೆರಿಗೆ ಸಂಗ್ರಹ ಗುರಿ: 220 ಕೋಟಿ ರೂ.
1 ತಿಂಗಳಲ್ಲಿ ಸಂಗ್ರಹ: 92.24 ಕೋಟಿ ರೂ.
2023 ರ ತೆರಿಗೆ ಸಂಗ್ರಹ ಗುರಿ: 182 ಕೋಟಿ ರೂ.
1 ತಿಂಗಳಲ್ಲಿ ಸಂಗ್ರಹ: 84.42 ಕೋಟಿ ರೂ.