91 ಕೆಜಿ ಚೀಲ ಹೊತ್ತು ಹರಕೆ ತೀರಿಸಿದ ಭಕ್ತರು

333
Published on

ಕನಕಗಿರಿ (ಕೊಪ್ಪಳ) : ತಾಲೂಕಿನ ಹಿರೇಖೆಡ ಗ್ರಾಮದಲ್ಲಿ ಅಲಾಯಿ ದೇವರಿಗೆ ಹರಕೆ ಹೊತ್ತುಕೊಂಡ ಭಕ್ತರು ಶನಿವಾರ ಬರೋಬ್ಬರಿ 91 ಕೆಜಿ ಹುರುಳಿ ಚೀಲ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿ ಸಾಹಸ ಮೆರೆದರು.


ಮೊಹರಂ ನಿಮಿತ್ತ ಗ್ರಾಮದಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಗಳು, ಶಕ್ತಿ ಪ್ರದರ್ಶನದಂತಹ ಸ್ಪರ್ಧೆಗಳು ಪ್ರತಿವರ್ಷವೂ ನಡೆಯುವುದು ಈ ಭಾಗದ ವಿಶೇಷ. ಅದರಂತೆ ಈ ವರ್ಷ ಗ್ರಾಮದ ಯುವಕರಾದ ಮಹಾಲಿಂಗಪ್ಪ, ಕಿರಣಕುಮಾರ್ ಹಾಗೂ ಸಿದ್ರಾಮೇಶ 91ಕೆಜಿ ತೂಕದ ಹುರುಳಿ ಕಾಳಿನ ಚೀಲ ಹೊತ್ತುಕೊಂಡು ಗ್ರಾಮದ ದ್ಯಾಮಮ್ಮದೇವಿ ದೇವಸ್ಥಾನದಿಂದ ಅಲಾಯಿ ದೇವರ ಮಸೀದಿಯವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು.


ನೆರದಿದ್ದ ಸಾವಿರಾರು ಜನ ಕೇಕೆ, ಸಿಳ್ಳೆ ಹಾಕುವ ಮೂಲಕ ಯುವಕರ ಸಾಹಸಕ್ಕೆ ಪ್ರೋತ್ಸಾಹಿಸಿದರು. ಭಾರಿ ತೂಕದ ಚೀಲಗಳನ್ನು ಹೊತ್ತು ಸಾಗಿದ ಯುವಕರು ಮಸೀದಿಗೆ ಆಗಮಿಸಿ ಅಲಾಯಿ ದೇವರಿಗೆ ನಮಸ್ಕರಿಸಿ ಹರಕೆ ತೀರಿಸಿದರು.ಮಹಿಳೆಯರು, ಮಕ್ಕಳು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಭೀಮನಗೌಡ, ಸದಸ್ಯರಾದ ಲಚಮಮ್ಮ ಬಾರಿಮರದಪ್ಪ ನಡಲಮನಿ, ಬಾರಿಮರದಪ್ಪ ಬಂಡ್ರಾಳ್, ಮುಖಂಡರಾದ ಸಿದ್ದೇಶ ಕುಟಗಮರಿ, ಗುರುನಾಥ ಉಚ್ಚಲಕುಂಟಿ, ಈಶಪ್ಪ ಹೊಸ್ಕೇರಾ, ಬಾರಿಮರದಪ್ಪ ತೊಂಡ್ಯಾಳ, ಹುಲುಗಪ್ಪ ಹರಿಜನ, ರಾಮಣ್ಣ ಬಂಗಾರಿ, ಮುದುಕೇಶ ನಾಯಕ, ಸೋಮನಾಥ ಜಿನ್ನೂರು, ಯಮನೂರಪ್ಪ ಬಂಗಾರಿ, ಹನುಮಂತ ಹಿರಾಪೂರ, ಅಮರೇಶ ದೇವರಮನಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net