

ವಿಕ್ರಮ ನಾಡಿಗೇರ ಧಾರವಾಡ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿ ಸಹಾಯ ಧನ ಪಡೆಯಲು ಇ-ಕೆವೈಸಿ ಕಡ್ಡಾಯ ನಿಯಮಕ್ಕೆ ಜಿಲ್ಲೆಯಲ್ಲಿ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶೇ. 91.53ರಷ್ಟು ಇ ಕೆವೈಸಿಯೊಂದಿಗೆ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಕೇಂದ್ರ ಸರ್ಕಾರ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ 2019ರಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿದೆ. ಪ್ರತಿ ಬಾರಿ 2 ಸಾವಿರ ರೂ.ದಂತೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರದ ಜತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಎರಡು ಕಂತುಗಳಲ್ಲಿ ವಾರ್ಷಿಕ 4 ಸಾವಿರ ರೂ.ಗಳನ್ನು ನೀಡುತ್ತಿತ್ತು. ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಕಾರಣದಿಂದ ಸದ್ಯ ಈ ಯೋಜನೆ ಸ್ಥಗಿತವಾಗಿದೆ. ಹೀಗಾಗಿ ರೈತರಿಗೆ ಕೇಂದ್ರ ಸರ್ಕಾರ 6 ಸಾವಿರ ರೂ. ಮಾತ್ರ ಬರುತ್ತಿದೆ. ಈ ಯೋಜನೆ ಲಾಭ ಪಡೆಯಲು ಲಾನುಭವಿ ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿ ಧಾರವಾಡ ಜಿಲ್ಲೆಯಲ್ಲಿ 1,20,302 ರೈತರು ನೋಂದಾಯಿಸಿದ್ದಾರೆ. ಈ ಪೈಕಿ 1,10,114 ರೈತರು ಈಗಾಗಲೇ ಸರ್ವೇ ನಂಬರ್, ಆಧಾರ ನಕಲು ಪ್ರತಿ, ಮೊಬೈಲ್ ಸಂಖ್ಯೆ, ಬ್ಯಾಂಕ್ ದಾಖಲೆ ಸೇರಿ ಅಗತ್ಯ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ನೀಡುವ ಮೂಲಕ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ರೈತರು ಇ-ಕೆವೈಸಿ ಮಾಡಿಸಿದ್ದರಿಂದ ಜಿಲ್ಲೆ ಶೇ. 91.53ರಷ್ಟು ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಯೋಜನೆಯ ಅನುಕೂಲ ಅರ್ಹ ಲಾನುಭವಿಗಳಿಗೆ ಸಿಗಲಿ ಎಂಬ ದೃಷ್ಟಿಯಿಂದ ಹಾಗೂ ಅರ್ಹರಿಗೆ ಸಿಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಇ-ಕೆವೈಸಿ ಕಡ್ಡಾಯವಾಗಿದೆ. ಜಿಲ್ಲೆಯ ಬಹುತೇಕ ರೈತರು ಇ-ಕೆವೈಸಿ ಪೂರ್ಣಗೊಳಿಸಿದ್ದು, ಉಳಿದವರು ಸಹ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಮಾಡಿಸಬಹುದು.
* ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ
ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ ಅಡಿ ಸಹಾಯ ಧನ ಪಡೆಯಲು ಇ-ಕೆವೈಸಿ ಕಡ್ಡಾಯ. ಎಲ್ಲ ಅರ್ಹ ಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಂಡಾಗ ಮಾತ್ರ ಕಂತುಗಳನ್ನು ಪಡೆಯಬಹುದು. ಇಲ್ಲವಾದಲ್ಲಿ ಕಂತುಗಳು ಪಾವತಿಯಾಗುವುದಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಶೇ. 91ರಷ್ಟು ರೈತರು ಇ-ಕೆವೈಸಿ ಮಾಡಿಸಿದ್ದಾರೆ. ಉಳಿದವರಿಗೂ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೂಡಲೇ ಇ-ಕೆವೈಸಿ ಮಾಡಿಕೊಸಿಕೊಂಡು ಯೋಜನೆಯ ಲಾಭ ಪಡೆದುಕೊಳ್ಳಲಿ.