

ಬೀದರ್: ಚಿಟಗುಪ್ಪ ತಾಲೂಕಿನ ಮುತ್ತಂಗಿಯಲ್ಲಿ 90 ವರ್ಷದ ಅಜ್ಜಿ ಭರ್ಜರಿ ಜಯ ಗಳಿಸಿ ಗ್ರಾಪಂಗೆ ಪ್ರವೇಶಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಅತೀ ಹಿರಿಯ ಗ್ರಾಪಂ ಸದಸ್ಯೆ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಮುತ್ತಂಗಿ ವಾಡ್೯ 2ರ ಎಸ್ಸಿ ಮೀಸಲು ಕ್ಷೇತ್ರದ ಗುಜ್ಜಮ್ಮಾ ಶಂಕ್ರೆಪ್ಪ ಹೊಸಮನಿ(90) ಅವರು 287 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಪುಣ್ಯವತಿ ಅವರಿಗೆ 33 ಮತಗಳಿಂದ ಸೋಲಿಸಿದ್ದಾರೆ. ಗ್ರಾಮ ವಿಕಾಸದ ದೃಷ್ಟಿಯಿಂದ ಸ್ಥಳೀಯರ ಒತ್ತಡದ ಮೇರೆಗೆ ಗುಜ್ಜಮ್ಮ ಅವರು ಅಖಾಡಕ್ಕಿಳಿದಿದ್ದರು. ಗುಜ್ಜಮ್ಮ ಅವರ ಮಕ್ಕಳು, ಮೊಮ್ಮಕ್ಕಳು ಉನ್ನತ ಹುದ್ದೆಗಳಲಿದ್ದಾರೆ. ಗುಜ್ಜಮ್ಮ ಅವರ ಹೆಸರಿನಲ್ಲಿ ಅವರೆಲ್ಲರೂ ಸ್ವಗ್ರಾಮ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದಾರೆ. ಹೀಗಾಗಿ ಎಲ್ಲರೂ ಅಜ್ಜಿಗೆ ಸಾಥ್ ನೀಡಿ ಗೆಲ್ಲಿಸಿದ್ದಾರೆ ಎನ್ನುತ್ತಾರೆ ಸ್ಥಳೀಯ ಮಲ್ಲಿಕಾರ್ಜುನ.