

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕರೊನಾ ಹೊಸ ಪ್ರಕರಣಗಳ ಏರಿಕೆಯ ನಡುವೆ ಸಾವು ಪ್ರಕರಣಗಳು
ವರದಿಯಾಗುತ್ತಿವೆ.
ಮೊದಲ ಮತ್ತು ಎರಡನೇ ಅಲೆಯ ಬಳಿಕ ಹೊಸ ಪ್ರಕರಣಗಳು ಮತ್ತು ಗುಣ ಪ್ರಕರಣಗಳನ್ನು ಹೊರತುಪಡಿಸಿದಂತೆ ನಿರಂತರವಾಗಿ ಹಲವು ತಿಂಗಳ ಕಾಲ ಸಾವು ಪ್ರಕರಣಗಳು ಶೂನ್ಯವಾಗಿತ್ತು. ಆದರೆ, ಸೋಂಕಿಗೆ ಮಂಗಳವಾರ 1, ಬುಧವಾರ 2, ಗುರುವಾರ 1 ಸಾವು ಸಂಭವಿಸಿದೆ. ಇಲ್ಲಿಯವರೆಗೂ 440 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 50571 ಸೋಂಕು ದೃಢಪಟ್ಟ ಪ್ರಕರಣಗಳ ಪೈಕಿ 45,656 ಮಂದಿ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 4475 ಸಕ್ರಿಯ ಪ್ರಕರಣಗಳಿವೆ. ಗುರುವಾರ 905 ಹೊಸ ಪ್ರಕರಣಗಳು ಪತ್ತೆಯಾಗಿದ್ದು 682 ಮಂದಿಗೆ ಸೋಂಕು ಗುಣವಾಗಿದೆ.
ಶಾಲೆಗಳಲ್ಲೂ ಸೋಂಕು: ಶಾಲೆಗಳಲ್ಲೂ ಸೋಂಕು ಅಬ್ಬರಿಸುತ್ತಿದ್ದು ಮೂರನೇ ಅಲೆಯಲ್ಲಿ 72 ಶಾಲೆಗಳಲ್ಲಿ 375 ವಿದ್ಯಾರ್ಥಿಗಳು ಮತ್ತು 114 ಶಿಕ್ಷಕರಿಗೆ (ಜ.24ರವರೆಗೆ) ಕರೊನಾ ದೃಢಪಟ್ಟಿದೆ. ಸೋಂಕಿತ ವಿದ್ಯಾರ್ಥಿಗಳ ಪೈಕಿ 189 ಗಂಡು ಮಕ್ಕಳು ಹಾಗೂ 186 ಹೆಣ್ಣು ಮಕ್ಕಳು, ಶಿಕ್ಷಕರ ಪೈಕಿ 58 ಪುರುಷ ಶಿಕ್ಷಕರು ಮತ್ತು 56 ಮಹಿಳಾ ಶಿಕ್ಷಕರು ಸೋಂಕಿಗೆ ಒಳಗಾಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ತಗುಲುವ ಮಕ್ಕಳು ಮತ್ತು ಶಾಲೆಗಳ ಸಂಖ್ಯೆ ಏರುಮುಖವಾಗುತ್ತಿದೆ.
ಸೋಂಕಿನ ಪ್ರಕರಣಗಳು ಅಧಿಕವಾಗಿ ಕಂಡು ಬಂದ ಕಡೆಗಳಲ್ಲಿ ಶಾಲೆಗಳಿಗೆ ಬೀಗ ಹಾಕಲಾಗುತ್ತಿದೆ. ಸರ್ಕಾರ ಶಾಲೆಗಳಿಗೆ ಎಂದು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿಲ್ಲ. ಆದರೆ ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳು ಸೋಂಕು ಅಧಿಕವಾದ ಕಡೆ ಮೂರು ದಿನ ಶಾಲೆ ಬಂದ್ ಮಾಡಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕರೊನಾ ಪರೀಕ್ಷೆ ವೇಳೆ ಶಿಕ್ಷಕರೇ ಮೊಬೈಲ್ ಸಂಖ್ಯೆಗಳನ್ನು ನೀಡುತ್ತಿದ್ದು, ಪಾಸಿಟಿವ್, ನೆಗೆಟಿವ್ ಮಾಹಿತಿಯನ್ನು ಪ್ರತಿ ದಿನವೂ ಶಿಕ್ಷಣ ಇಲಾಖೆಯಲ್ಲಿ ದಾಖಲಿಸಲಾಗುತ್ತಿದೆ. ಮತ್ತೊಂದೆಡೆ ಬಹಳಷ್ಟು ಮಕ್ಕಳಿಗೆ ವ್ಯಾಪಕವಾಗಿ ಜ್ವರದ ಲಕ್ಷಣಗಳು ಕಂಡು ಬರುತ್ತಿವೆ.