

ನರಗುಂದ: ಹಳೆ ಬೇರು ಹೊಸ ಚಿಗುರಿನ ತಲೆಮಾರುಗಳ ಇತಿಹಾಸದ ಬುತ್ತಿ ಬಿಚ್ಚಿಡುವ, ಕಳಚಿರುವ ಸಂಬಂಧ ಹಾಗೂ ಆದಿ ಕಾಲದ ಹಿರಿತನದ ಕುಟುಂಬದ ಹಿನ್ನೆಲೆಯನ್ನು ನೆನಪಿಸುವ ಮಹತ್ಕಾರ್ಯದಲ್ಲಿ ಹೆಳವರು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗೆ ವಂಶಾವಳಿ ಓದುತ್ತಾ ಪಟ್ಟಣಕ್ಕೆ ಆಗಮಿಸಿದ್ದ ಹೆಳವರ ಕುಟುಂಬವೊಂದು ಮಹತ್ವದ ದಾಖಲಾತಿಗಳ ಪುಸ್ತಕ ಕಳೆದುಕೊಂಡಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪುಸ್ತಕವಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದು ತುತ್ತು ಅನ್ನಕ್ಕಾಗಿ ಚಿಂತಿಸುವಂತಾಗಿದೆ.
ಕಾರವಾರ ಜಿಲ್ಲೆ ಹಳಿಯಾಳ ತಾಲೂಕಿನ ಹೊಸ ವಟ್ನಾಳ ಗ್ರಾಮದಿಂದ 15 ದಿನಗಳ ಹಿಂದೆ ನರಗುಂದಕ್ಕೆ ಆಗಮಿಸಿದ್ದ ಬಾಳಪ್ಪ ಫಕೀರಪ್ಪ ಹೆಳವರ ಎಂಬುವರು 900 ವರ್ಷಗಳ ಇತಿಹಾಸ ಹೊಂದಿದ ಪುಸ್ತಕ ಕಳೆದುಕೊಂಡು ಕಂಗಾಲಾಗಿದ್ದಾರೆ.
ನರಗುಂದ ಕುರ್ಲಗೇರಿ ರಸ್ತೆಯ ಡಾಲರ್ಸ್ ಕಾಲನಿಯಲ್ಲಿ ವಾಸವಾಗಿರುವ ಬಾಳಪ್ಪ ಎಂದಿನಂತೆ ಸೋಮವಾರ ಬೆಳಗ್ಗೆ ತಾಲೂಕಿನ ಬೆನಕನಕೊಪ್ಪದ ಈರಪ್ಪ ಮೈಲಾರೆಪ್ಪ ಗಾಣಿಗೇರ ಎಂಬುವರ ಮನೆಗೆ ತೆರಳಿ ವಂಶಾವಳಿ ಹೇಳಿ ಬೈಕ್‌ನಲ್ಲಿ ನರಗುಂದಕ್ಕೆ ವಾಪಸ್ ಬರುತ್ತಿದ್ದರು. ಈ ವೇಳೆ ಹಿಂಬದಿ ಸವಾರನ ಜೋಳಿಗೆಯಲ್ಲಿಟ್ಟಿದ್ದ ಮಹತ್ವದ ಗ್ರಂಥ ನಾಪತ್ತೆಯಾಗಿದೆ. ನರಗುಂದಕ್ಕೆ ಬಂದು ಜೋಳಿಗೆಯಲ್ಲಿಟ್ಟಿದ್ದ ದವಸ, ಧಾನ್ಯ ಬೇರ್ಪಡಿಸಿದಾಗ ಗ್ರಂಥ ಕಳೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಾಳಪ್ಪ ನರಗುಂದ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರೆ.
ಧಾರವಾಡ ಹಾಗೂ ಗದಗ ಜಿಲ್ಲೆಯ ವಿವಿಧ ತಾಲೂಕಿನ ಸಾವಿರಾರು ಕುಟುಂಬಗಳ ವಂಶಾವಳಿ, ಕುಟುಂಬದ ಸದಸ್ಯರ ಹೆಸರು, ಸಂಖ್ಯೆ, ಮನೆ ದೇವರು, ಬೆಡಗ, ಅಜ್ಜ-ಮುತ್ತಜ್ಜನ ಸಮಗ್ರ ಮಾಹಿತಿಯನ್ನೊಳಗೊಂಡಿರುವ 900 ವರ್ಷಗಳ ಮಹತ್ವದ ಪುಸ್ತಕ ಯಾರಿಗಾದರೂ ದೊರೆತಿದ್ದರೆ ನರಗುಂದ ಪೊಲೀಸ್ ಠಾಣೆ ಅಥವಾ ಡಾಲರ್ಸ್ ಕಾಲನಿಯಲ್ಲಿರುವ ಹೆಳವರ ಗುಡಿಸಲಿಗೆ ಬಂದು ತಲುಪಿಸುವಂತೆ ಮನವಿ ಮಾಡಿದ್ದಾರೆ.