ವಿರಾಜಪೇಟೆ ಕ್ಷೇತ್ರಕ್ಕೆ 900 ಕೋಟಿ ಅನುದಾನ

9-nplk-2
ಕುಂಜಲಗೇರಿ ಗ್ರಾಮದಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಭೆಯಲ್ಲಿ ಶಾಸಕ ಎ. ಎಸ್ ಪೊನ್ನಣ್ಣ ಮಾತನಾಡಿದರು.
Published on

ನಾಪೋಕ್ಲು: ವಿರಾಜಪೇಟೆ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲೇ ಸುಮಾರು 900 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಶಾಸಕರೂ ಆದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾಹಿತಿ ನೀಡಿದರು.

ಸಮೀಪದ ಕುಂಜಲಗೇರಿ ಗ್ರಾಮದಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿ, ಮಳೆಗಾಲದ ಬಳಿಕ ತಮ್ಮ ಅವಧಿಯ ಪ್ರಗತಿಯ ಮಾಹಿತಿಯನ್ನು ಪುಸ್ತಕ ಹೊರತರುವುದರ ಮೂಲಕ ಮಾಹಿತಿ ಬಹಿರಂಗಪಡಿಸುತ್ತೇನೆ. ಕ್ಷೇತ್ರ ವ್ಯಾಪ್ತಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಲವು ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ವಿಶೇಷವಾಗಿ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಅನುಷ್ಠಾನವಾಗಿದೆ. ಇದರ ಪ್ರಚಾರ ಮಾಡಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರ ಶ್ರಮ ದೊಡ್ಡದಾಗಿರಬೇಕೆಂದು ಹೇಳಿದರು.

ಮುಖ್ಯಮಂತ್ರಿಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಚುರುಕಾಗಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಗೆ ಆಗಮಿಸಿ ಸ್ಥಳೀಯ ಮುಖಂಡರು ತಮ್ಮ ಬೇಡಿಕೆ, ಮನವಿ ಶಾಸಕರಿಗೆ ಸಲ್ಲಿಸಿದರು. ಇದರಲ್ಲಿ ಪ್ರಮುಖವಾಗಿ ನಾಲ್ಕು ರಸ್ತೆಗಳ ಉನ್ನತೀಕರಣದ ಬೇಡಿಕೆ ಇರುವುದನ್ನು ಪರಿಗಣಿಸಿದ ಶಾಸಕರು, ಎರಡು ರಸ್ತೆಗೆ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ಹೇಳಿ, ಉಳಿದ ರಸ್ತೆಗಳನ್ನು ಆದ್ಯತೆ ಮೇರೆಗೆ ಮಾಡಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಹಾಗೂ ಶಾಸಕರ ಕೆಲಸ ಕಾರ್ಯಗಳನ್ನು ಮೆಚ್ಚಿ, ಈ ಭಾಗದ ಸುಮಾರು 70ಕ್ಕೂ ಅಧಿಕ ನಾಯಕರುಹಾಗೂ ಕಾರ್ಯಕರ್ತರು ಇತರ ಪಕ್ಷಗಳನ್ನು ತೊರೆದು ಪಕ್ಷ ಸೇರ್ಪಡೆಗೊಂಡರು. ಎಲ್ಲರನ್ನೂ ಪಕ್ಷದ ಶಲ್ಯ ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಯುವ ಕಾಂಗ್ರೆಸ್ ಕೊಡಗು ಜಿಲ್ಲಾಧ್ಯಕ್ಷ ಜಮ್ಮಡ ಸೋಮಣ್ಣ, ಯುವ ಕಾಂಗ್ರೆಸ್ ವಿರಾಜಪೇಟೆ ಕ್ಷೇತ್ರ ಅಧ್ಯಕ್ಷ ಪಟ್ಟಡ ರಕ್ಷಿತ್, ವಲಯ ಕಾಂಗ್ರೆಸ್ ಪ್ರಮುಖರಾದ ಬಟ್ಟಕಾಳಂಡ ರಾಜ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಇದ್ದರು. ಕಾರ್ಯಕ್ರಮಕ್ಕೆ ಮೊದಲು ಶ್ರೀ ಭಗವತಿ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net