90 ಗ್ರಾಮಕ್ಕೆ ಸ್ವಾಮಿತ್ವ ಆಸ್ತಿಪತ್ರ ವಿತರಣೆ

28Jaggu2
ಬೆಳಗಾವಿ ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಯಡಿ ಡ್ರೋನ್ ಸರ್ವೇ ಮಾಡುತ್ತಿರುವುದು.
Published on

ಬೆಳಗಾವಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ‘ಸ್ವಾಮಿತ್ವ’ದಡಿ ಜಿಲ್ಲೆಯಲ್ಲಿ 90 ಗ್ರಾಮಗಳಲ್ಲಿ ಮನೆಗಳ ಮಾಲೀಕರಿಗೆ ಆಸ್ತಿಪತ್ರ ವಿತರಿಸಲಾಗಿದ್ದು, ಯೋಜನೆ ಪ್ರಗತಿಯಲ್ಲಿದೆ.

2021ರಲ್ಲಿ ಜಿಲ್ಲೆಯ 216 ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆ ಆದೇಶದನ್ವಯ 216 ಹಳ್ಳಿಗಳ ಪೈಕಿ 127 ಗ್ರಾಮಗಳಲ್ಲಿ ಮಾರ್ಕಿಂಗ್ ಪೂರ್ಣಗೊಳಿಸಲಾಗಿದ್ದು, 91 ಗ್ರಾಮಗಳಲ್ಲಿ ಡ್ರೋನ್ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇದರಲ್ಲಿ 90 ಗ್ರಾಮಗಳಲ್ಲಿ ಮನೆಗಳ ಮಾಲೀಕರಿಗೆ ಡ್ರಾಫ್ಟ್ ಪಿ.ಆರ್. (ಪ್ರಾಪರ್ಟಿ) ಕಾರ್ಡ್ ವಿತರಿಸಲಾಗಿದೆ. ಒಂದು ಗ್ರಾಮದಲ್ಲಿ ಸರ್ವೇ ಮಾಡಿರುವ ಬಗ್ಗೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಡ್ರೋನ್ ಸರ್ವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಇಲ್ಲದ ಪ್ರದೇಶಗಳಲ್ಲಿ ಸರ್ವೇ ಕಾರ್ಯ ಮಾಡುವಂತೆ ಭಾರತೀಯ ಸರ್ವೇಕ್ಷಣಾ ಇಲಾಖೆಯು ತಿಳಿಸಿದೆ. ಮಳೆ ನಿಂತ ಮೇಲೆ ಜಿಲ್ಲೆಯಲ್ಲಿ ಬಾಕಿ ಉಳಿದ ಗ್ರಾಮಗಳ ಸರ್ವೇ ಮಾಡಿ ಮನೆಗಳ ಮಾಲೀಕರಿಗೆ ವೈಯಕ್ತಿಕ ಆಸ್ತಿಪತ್ರಗಳನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಿಕರಿಗೆ ಯೋಜನೆಯ ಲಾಭ: ಸ್ವಾಮಿತ್ವ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಆಸ್ತಿದಾರರಿಗೆ ಅಧಿಕೃತ ಆಸ್ತಿಪತ್ರಗಳು ಲಭ್ಯವಾಗುತ್ತವೆ. ಇದರಿಂದ ಆಸ್ತಿದಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಹಾಗೂ ಇತರೆ ಆರ್ಥಿಕ ಸೌಲಭ್ಯ ಪಡೆಯಲು ಸುಲಭವಾಗುತ್ತದೆ. ಯೋಜನೆಯಿಂದಾಗಿ ಆಸ್ತಿಗಳ ಮಧ್ಯೆ ಸಂಭವನೀಯ ವ್ಯಾಜ್ಯಗಳು ಕಡಿಮೆಯಾಗುತ್ತವೆ. ಸರ್ಕಾರದಿಂದ ಸೌಲಭ್ಯಗಳ ಸದುಪಯೋಗ ಪಡೆಯಲು ಈ ಆಸ್ತಿ ಕಾರ್ಡ್‌ಗಳು ಉಪಯೋಗವಾಗುತ್ತವೆ. ಅಲ್ಲದೆ ಸರ್ಕಾರಕ್ಕೂ ಗ್ರಾಮೀಣ ಪ್ರದೇಶದಲ್ಲಿ ಆಸ್ತಿಗಳ ನಿಖರವಾದ ದಾಖಲೆಗಳ ಸೃಷ್ಟಿಸಲು ಸಹಾಯವಾಗುತ್ತದೆ. ಆಸ್ತಿಗಳ ತೆರಿಗೆ ನಿರ್ಧರಿಸಲು, ವಿವಿಧ ಇಲಾಖೆಗಳ ಯೋಜನೆ ಅನುಷ್ಠಾನಗೊಳಿಸಲು ಸಹಾಯವಾಗುತ್ತವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತವೆ.

ರಾಜ್ಯದಲ್ಲಿ 2021ರ ಸಾಲಿನಲ್ಲಿ 16600 ಹಳ್ಳಿಗಳಲ್ಲಿ ‘ಸ್ವಾಮಿತ್ವ’ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಬೆಳಗಾವಿ ಜಿಲ್ಲೆ ಒಳಗೊಂಡಂತೆ ಒಟ್ಟು 16 ಜಿಲ್ಲೆಗಳಲ್ಲಿ ಸ್ವಾಮಿತ್ವ ಯೋಜನೆಯು ಚಾಲ್ತಿಯಲ್ಲಿದೆ. ಈ ಯೋಜನೆಯು ಕಂದಾಯ ಇಲಾಖೆ (ಭೂಮಾಪನ), ಪಂಚಾಯತ ರಾಜ್ ಅಭಿವೃದ್ಧಿ ಇಲಾಖೆ ಹಾಗೂ ಭಾರತೀಯ ಸರ್ವೇಕ್ಷಣಾ ಇಲಾಖೆಗಳನ್ನು ಒಳಗೊಂಡಿದ್ದು, ಈ ಇಲಾಖೆಗಳ ಸಮನ್ವಯದಲ್ಲಿ ಪ್ರಗತಿಯಲ್ಲಿವೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅಥಣಿ ತಾಲೂಕಿನ ಅರಟಾಳ ಹಾಗೂ ಬಡಚಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ, ಈ ಗ್ರಾಪಂ ವ್ಯಾಪ್ತಿಯ ಬಡಚಿ, ಬಾಡಗಿ, ಹಾಲಳ್ಳಿ, ಅರಟಾಳ, ಖೋತನಟ್ಟಿ ಹಾಗೂ ದೇಸರಟ್ಟಿ ಗ್ರಾಮಗಳಲ್ಲಿ ಯೋಜನೆ ಯಶಸ್ವಿಗೊಳಿಸಲಾಯಿತು. 2021ರ ಜುಲೈ 5ರಂದು ಆಸ್ತಿ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

‘ಸ್ವಾಮಿತ್ವ’ ಯೋಜನೆಯಡಿ ಈಗಾಗಲೇ ಜಿಲ್ಲೆಯ 90 ಗ್ರಾಮಗಳಲ್ಲಿ ಮನೆಗಳ ಆಸ್ತಿಪತ್ರಗಳನ್ನು ಹಂಚಿಕೆ ಮಾಡಲಾಗಿದೆ. ಡ್ರೋನ್ ಸರ್ವೇಗೆ ಅತಿಯಾದ ಗಾಳಿ, ಮಳೆ ಇರಬಾರದು. ಹೀಗಾಗಿ ಸ್ವಲ್ಪ ಮಳೆ ಕಡಿಮೆಯಾದ ಬಳಿಕ ಜಿಲ್ಲೆಯಲ್ಲಿ ಡ್ರೋನ್ ಸರ್ವೇ ಕಾರ್ಯ ಮುಂದುವರಿಯಲಿದೆ.| ಮೋಹನ ಶಿವಣ್ಣವರ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕ, ಬೆಳಗಾವಿ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net