9 ರಿಂದ ಮಲ್ಲಾಡಳಿಹಳ್ಳಿಯಲ್ಲಿ ಪುಣ್ಯಾರಾಧನೆ, ರಂಗದಾಸೋಹ

CTD RANGA DASAHOOO--
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಳಿಹಳ್ಳಿ ಅನಾಥ ಸೇವಾಶ್ರಮದ ವಿಶ್ವಸ್ಥ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.9 ರಿಂದ 3 ದಿನಗಳ ಕಾಲ ಮಲ್ಲಾಡಳಿಹಳ್ಳಿ ಶ್ರೀ ಸೂರುದಾಸ್‌ಜಿ ರಂಗಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಶ್ರೀ ಸೂರುದಾಸ್ ಸ್ವಾಮೀಜಿ ಅವರ ಪುಣ್ಯಾರಾಧನೆ ಹಾಗೂ ತಿರುಕನೂರಿನಲ್ಲಿ ರಂಗದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

9ರ ಬೆಳಗ್ಗೆ 9ಕ್ಕೆ ಪೂಜ್ಯದ್ವಯರ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ನಟ ಶ್ರೀನಾಥ್ ಉದ್ಘಾಟಿಸಲಿದ್ದಾರೆ. ಅಮೃತ್ ಆರ್ಗಾನಿಕ್ಸ್ ಮಾಲೀಕ ನಾಗರಾಜ್ ಸೇರಿ ನಾನಾ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾತ್ರಿ 7.30ಕ್ಕೆ ಮಂಜಳಾ ಬದಾಮಿ ನಿರ್ದೇಶನ, ವೈದೇಹಿ ರಚನೆಯ ನಾಯಿಮರಿ ನಾಟಕವನ್ನು ಮಲ್ಲಾಡಿಹಳ್ಳಿ ತಿರುಕರಂಗ ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.

10 ರಂದು ಸಂಜೆ 5.30ಕ್ಕೆ ಸಂಸದ ಗೋವಿಂದ ಎಂ.ಕಾರಜೋಳ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಪಾಲ್ಗೊಳ್ಳಲಿದ್ದಾರೆ. ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಮತ್ತಿತರ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ7.30ಕ್ಕೆ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ, ಕಂದಗಲ್ ಹನುಮಂತರಾಯ ರಚನೆಯ ರಕ್ತ ರಾತ್ರಿ ನಾಟಕವನ್ನು ಸಿದ್ದಾಪುರದ ರಂಗ ಸೌಗಂಧ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. 11ರಂದು ಸಂಜೆ 5.30ಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಅಧ್ಯಕ್ಷತೆಯಲ್ಲಿ ಏರ್ಪಡಿಸಿರುವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಬಾ.ಮ. ಬಸವರಾಜಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ.‘ಇನ್ ಸೈಟ್-ಐಎಎಸ್’ ಸಂಸ್ಥಾಪಕ ಬಿ.ಜಿ. ವಿನಯಕುಮಾರ್, ಬೆಂಗಳೂರು ಎಸ್‌ಪಿ ವೆಂಕಟೇಶ್ ಪ್ರಸನ್ನ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ. ಎಲ್ಲ ಕಾರ್ಯಕ್ರಮಗಳಲ್ಲೂ ವಿಶ್ವಸ್ಥ ಸಮಿತಿ ಪ್ರಮುಖರು ಉಪಸ್ಥಿತರಿರುತ್ತಾರೆ. ರಾತ್ರಿ 7.30ಕ್ಕೆ ವೈ.ಡಿ.ಬದಾಮಿ ನಿರ್ದೇಶನದಲ್ಲಿ, ಎಚ್.ಎಸ್.ವೆಂಕ ಟೇಶ್‌ಮೂರ್ತಿ ರಚನೆಯ ಚಿತ್ರಪಟ ನಾಟಕವನ್ನು ತಿರುಕರಂಗ ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿಗಳು ಪ್ರದರ್ಶಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net