

ವಿರಾಜಪೇಟೆ : ಛತ್ರಕೆರೆಯ ಶ್ರೀ ವೀರಾಂಜನೇಯ ಸ್ವಾಮಿ ನವೀಕೃತ ದೇಗುಲ 25 ನೇ ವಾರ್ಷಿಕೋತ್ಸ ಮತ್ತು ಮರು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮೇ 9 ಮತ್ತು 10 ರಂದು ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ದಾನಿಗಳ ನೆರವಿನಿಂದ ನವೀಕೃತಗೊಂಡ ದೇಗುಲದಲ್ಲಿ ಎರಡೂ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ, ಹಲವು ಕೈಂಕರ್ಯಗಳನ್ನು ಆಯೋಜನೆ ಮಾಡಲಾಗಿದೆ ಎಂದು ದೇಗುಲ ಸಮಿತಿ ಅಧ್ಯಕ್ಷ ಮಾಳೇಟಿರ ಸನ್ನಿ ಕಾವೇರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2001 ರಲ್ಲಿ ನಿರ್ಮಾಣವಾಗಿದ್ದ ದೇವಾಲಯ ಇದೀಗ 15 ಲಕ್ಷ ರೂ.ವೆಚ್ಚದಲ್ಲಿ ನವೀಕೃತಗೊಂಡಿದೆ. 25 ನೇ ವಾರ್ಷಿಕೋತ್ಸವವೂ ಇದೇ ಸಂದರ್ಭ ಸಂಪನ್ನಗೊಳ್ಳಲಿದೆ. ಎರಡೂ ದಿನ ವಿಶೇಷ ವಿಧಿ, ವಿಧಾನಗಳು ನೆರವೇರಲಿವೆ ಎಂದರು. ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಮಾತನಾಡಿ, ದೇವಾಲಯದ ಮರು ಪ್ರತಿಷ್ಠಾ ಮಹೋತ್ಸವವು ಕಲ್ಪಡ ವೇದ ಮೂರ್ತಿ ಸುಬ್ರಮಣ್ಯ ಉಪಾಧ್ಯಾಯ ನೇತೃತ್ವದಲ್ಲಿ ನಡೆಯಲಿದೆ.9 ರ ಮುಂಜಾನೆ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಋತ್ವೀಕರಣ ವಾಸ್ತು ಪೂಜೆ, ಹೋಮ, ಸುದರ್ಶನ ಹೋಮ, ಬಕುಳ ಶಾಂತಿ ಬಿಂಬ ಶುದ್ಧಿ ನಡೆಯಲಿದೆ. 10ರ ಬೆಳಗ್ಗೆ 6ಕ್ಕೆ ಪುಣ್ಯಾಹ, 8ಕ್ಕೆ ತೆಂಗಿನಕಾಯಿ ಗಣ ಹೋಮ, ನವಗ್ರಹ ಶಾಂತಿ, ವಾಯುಸ್ತುತಿ ಹೋಮ, ವಿಷ್ಣು ಹೋಮ, ಪ್ರತಿಷ್ಠಾ ಹೋಮ, ಮಹಾಪೂಜೆ- ಮಂತ್ರಾಕ್ಷತೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದರು. ದೇವಾಲಯದ ಆಡಳಿತ ಮಂಡಳಿ ಪ್ರಮುಖರಾದ ಕೆ.ಶಾಂತ ಕುಮಾರ, ಕುಪ್ಪಣಮಾಡ ಜಿ ಬಿದ್ದಪ್ಪ, ಕೃಷ್ಣ ಕುಮಾರ, ರಾಘವೇಂದ್ರ ಆಚಾರ್, ವಿಶ್ವನಾಥ ಇದ್ದರು.