

ತಿಪಟೂರು: ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಸೋಮವಾರ ರಾತ್ರಿ ಆಹಾರ ಸೇವಿಸಿದ 9 ಮಕ್ಕಳಲ್ಲಿ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದ್ದು, ತಕ್ಷಣವೇ ನಗರದ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಚೇತರಿಸಿಕೊಂಡಿದ್ದು, ವಿದ್ಯಾರ್ಥಿಗಳ ರಕ್ತದ, ಆಹಾರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ರಾತ್ರಿ ಚಪಾತಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿ ಗಣೇಶ್ ಎಂಬಾತನಿಗೆ ವಾಂತಿ ಆಗಿದ್ದು, ಪಾರ್ಥ, ಪಂಪಣ್ಣ, ಮಹಂತೇಶ್, ವಿನಯ್, ಸುರೇಶ್, ಗಣೇಶ್, ಮನೋಜ್ ಸಹ ಹೊಟ್ಟೆ ನೋವಿನಿಂದ ಬಳಲಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮಂಗಳವಾರ ಎಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಆರೋಗ್ಯಾಧಿಕಾರಿಗಳ ಭೇಟಿ:
ತಿಪಟೂರು ಎಸಿ ಬಿ.ಕೆ.ಸಪ್ತಶ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ, ಕೃಷ್ಣಪ್ಪ, ಸಹಾಯಕ ನಿರ್ದೇಶಕಿ ತ್ರಿವೇಣಿ ಸ್ಥಳ ಪರಿಶೀಲನೆ ನಡೆಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರಾಧಿಕಾ ಹಾಗೂ ಕೃಷ್ಣಮೂರ್ತಿ ನೇತೃತ್ವದ ತಂಡ ಹಾಸ್ಟೆಲ್ಗೆ ಭೇಟಿ ನೀಡಿ, ವಿದ್ಯಾರ್ಥಿಗಳ ರಕ್ತದ ಮಾದರಿ ಹಾಗೂ ರಾತ್ರಿ ಹಾಸ್ಟೆಲ್ನಲ್ಲಿ ತಯಾರಿಸಿದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮಕೃಗೊಳ್ಳುವುದಾಗಿ ಎಸಿ ಸಪ್ತಶ್ರೀ ತಿಳಿಸಿದರು.
"ವಿದ್ಯಾರ್ಥಿನಿಲಯದಲ್ಲಿ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಬಗ್ಗೆ ಮಾಹಿತಿ ದೊರೆತ ತಕ್ಷಣ ಸಹಾಯಕ ನಿರ್ದೇಶಕಿ ತ್ರಿವೇಣಿ, ವಾರ್ಡನ್ ಸುಧಾರಾಣಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಭೀರ ಪರಿಸ್ಥಿತಿ ಎದುರಾಗದೆ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಶಾಲೆಗಳಿಗೆ ರಜೆ ಇದ್ದ ಕಾರಣ ಹಾಸ್ಟೆಲ್ ಹೊರಗಡೆ ಊಟ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮವಹಿಸಲಾಗುವುದು."
> ಕೃಷ್ಣಪ್ಪ, ಜಂಟಿ ನಿರ್ದೇಶಕ, ಸಮಾಜಕಲ್ಯಾಣ ಇಲಾಖೆ
120 ವಿದ್ಯಾರ್ಥಿಗಳ ಹಾಸ್ಟೆಲ್
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 120 ವಿದ್ಯಾರ್ಥಿಗಳಿದ್ದು, ಸೋಮವಾರ ರಾತ್ರಿ ಎಂದಿನಂತೆ ಚಪಾತಿ ಊಟ ಸೇವಿಸಿದ್ದಾರೆ. ನಂತರ ಒಬ್ಬ ವಿದ್ಯಾರ್ಥಿಗೆ ವಾಂತಿ ಆಗಿದೆ. ಆ ಬಳಿಕ ಕೆಲವರಿಗೆ ವಾಂತಿ ಆಗುವ ಲಕ್ಷಣ ಕಾಣಿಸಿಕೊಂಡಿತಾದರೂ ವಾಂತಿ ಆಗಿಲ್ಲ. ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಸಹಾಯಕ ನಿರ್ದೇಶಕಿ ತ್ರಿವೇಣಿ, ವಾರ್ಡನ್ ಸುಧಾರಾಣಿ ವಿದ್ಯಾರ್ಥಿಗಳನ್ನು ತಿಪಟೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.