

ತರೀಕೆರೆ: ಬೇಲೇನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮಂಗಳವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ಡಿಕ್ಕಿ ಹೊಡೆದುಕೊಂಡಿದ್ದು 9 ಮಂದಿಗೆ ಪೆಟ್ಟಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಹಾವೇರಿ ಜಿಲ್ಲೆ ಹಿರೇಕೆರೂರಿನ ಇಮ್ರಾನ್ (35), ಮಮ್ತಾಜ್ (40), ನಾಜಿಯಾ (25), ಆಶಿಯಾ (28), ಸುಹಾನ್ (13), ಜಾಕೀರ್ (37), ಜುನೇದ್ (17), ಮದರ್‌ಸಾಬ್ (45) ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಹೆಸರು ತಿಳಿದುಬಂದಿಲ್ಲ. ಇಮ್ರಾನ್ ಹಾಗೂ ಮಮ್ತಾಜ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ವರನ ಕುಟುಂಬಸ್ಥರೆಲ್ಲರೂ ಸೋಮವಾರ ಕಡೂರಿನಲ್ಲಿ ವಧುವಿನ ಮನೆಗೆ ಮಾತುಕತೆಗೆಂದು ಕಾರಿನಲ್ಲಿ ಹೋಗಿದ್ದರು. ಮಾತುಕತೆ ತಡವಾಗಿದ್ದರಿಂದ ಊಟೋಪಚಾರ ಮುಗಿಸಿ ಮಂಗಳವಾರ ಬೆಳಗಿನ ಜಾವ 1 ಗಂಟೆ ಸಮಯದಲ್ಲಿ ಊರಿಗೆ ಹಿಂತಿರುಗುವಾಗ ಬೇಲೇನಹಳ್ಳಿ ಬಳಿ ಅಪಘಾತವಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಶಿವಮೊಗ್ಗ ಕಡೆಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.