ವಾಂತಿ-ಭೇದಿಯಿಂದ ಮಾಗವಾಡ, ಗೌಳಿವಾಡದ 9 ಮಂದಿ ಅಸ್ವಸ್ಥ

HLY VANTI
Published on

ಹಳಿಯಾಳ: ಮಹಾರಾಷ್ಟ್ರದ ಧಾರ್ವಿುಕ ಕ್ಷೇತ್ರ ಪಂಢರಾಪುರಕ್ಕೆ ತೆರಳಿದ್ದ ಹಳಿಯಾಳ ತಾಲೂಕಿನ ಮಾಗವಾಡ, ಗೌಳಿವಾಡ ಗ್ರಾಮದ ಒಂಬತ್ತಕ್ಕೂ ಹೆಚ್ಚು ಭಕ್ತರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ತಾಲೂಕಿನಲ್ಲಿ ವಾರಕರಿ ಸಂಪ್ರದಾಯದವರು ಹೆಚ್ಚಿನ ಪ್ರಮಾಣದಲ್ಲಿದ್ದು, ಇವರೆಲ್ಲರೂ ಪಂಢರಪುರ ವಿಠ್ಠಲ ರುಕ್ಮಾಯಿ ದೇವರ ಆರಾಧಕರಾಗಿದ್ದಾರೆ. ಇವರು ವರ್ಷದಲ್ಲಿ ನಾಲ್ಕೈದು ಬಾರಿ ಪಂಢರಪುರಕ್ಕೆ ಭೇಟಿ ನೀಡುತ್ತಾರೆ. ಹೀಗೆ ಇತ್ತೀಚೆಗೆ ಏಕಾದಶಿಯಂದು ಪಂಢರಪುರಕ್ಕೆ ತೆರಳಿದ್ದ ತಾಲೂಕಿನ ಮಾಗವಾಡ, ಗೌಳಿವಾಡದ 58ಕ್ಕೂ ಅಧಿಕ ಜನರಲ್ಲಿ ಸದ್ಯ ಒಂಬತ್ತಕ್ಕೂ ಹೆಚ್ಚು ಜನರು ಒಮ್ಮೆಲೆ  ಅಸ್ವಸ್ಥಗೊಂಡು ವಾಂತಿ-ಬೇಧಿಯಿಂದ ಬಳಲುತ್ತಿದ್ದಾರೆ.

ಅಸ್ವಸ್ಥಗೊಂಡಿರುವ ಇವರನ್ನು ಹಳಿಯಾಳದ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುನೀಲ ಕೊಳಾಪ್ಟೆ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ನಕ್ಲುಬಾಯಿ ಖರಾತ್, ಹೇಮಂತ ಖರಾತ, ಜನಾಬಾಯಿ ಯಡಗೆ, ಒಂದೇ ಕುಟುಂಬದ ಸಂತೋಷ ಕೊಳಾಪ್ಟೆ, ಜನಾಬಾಯಿ, ಠಕ್ಕುಬಾಯಿ, ಗೋದಾವರಿ, ಜನ್ನು ಅವರಿಗೆ ಹಳಿಯಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ನಾವು ಏಕಾದಶಿಗೆ ಪಂಢರಪುರಕ್ಕೆ ತೆರಳಿ ವಾಪಸ್ ಆಗುವಾಗಲೇ ಹಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಹಲವರಿಗೆ ಮಹಾರಾಷ್ಟ್ರದ ಮೀರಜ್​ನಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ನನಗೂ ಯಾವಾಗ ಸಮಸ್ಯೆ ಆಗಲಿದೆ ಎಂದು ತಿಳಿಯದಾಗಿದೆ. ನಮಗೆ ಭಯ ಆವರಿಸಿದೆ. | ಕೇದಾರಿ ಕೊಳಾಪ್ಟೆ ಪಂಢರಪುರಕ್ಕೆ ತೆರಳಿದ್ದ ಯಾತ್ರಿಕ ಈವರೆಗೆ ಒಂಬತ್ತು ಜನರನ್ನು ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಪ್ರತ್ಯೇಕ ವಾರ್ಡ್ ಮಾಡಿ ವಿಶೇಷ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ರೋಗಿಗಳ ಸ್ಯಾಂಪಲ್​ಗಳನ್ನು ಕಾರವಾರದ ಜಿಲ್ಲಾ ಲ್ಯಾಬ್​ಗೆ ಕಳಿಸಲಾಗಿದೆ.   | ಡಾ.ರಮೇಶ ಕದಂ ಆಡಳಿತಾಧಿಕಾರಿ, ಹಳಿಯಾಳ ತಾಲೂಕಾಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net