

ವಿಜಯವಾಣಿ ಸುದ್ದಿಜಾಲ ಧಾರವಾಡ
ಓದುವ ಛಲ ಇದ್ದರೆ ಸಾಕು ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಆ ಮಾತಿಗೆ ತಕ್ಕಂತೆ ಈ ಯುವತಿ ಬರೋಬ್ಬರಿ 9 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾಳೆ.
ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ, ಕವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಜಯಶ್ರೀ ತಳವಾರ ಈ ಸಾಧನೆ ಮಾಡಿದ್ದಾಳೆ. ತಾಯಿ ಮಂಜುಳಾ ಆಶಾ ಕಾರ್ಯಕರ್ತೆ ಹಾಗೂ ತಂದೆ ಮಹಾಂತೇಶ ಗ್ರಾಮ ಪಂಚಾಯಿತಿ ಸಿಪಾಯಿ.
ಆರ್ಥಿಕವಾಗಿ ಹಿಂದುಳಿದಿದ್ದರೂ ಮಕ್ಕಳು ಓದಿ ಉತ್ತಮ ವಿದ್ಯಾವಂತರಾಗಲಿ ಎಂದು ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇದಕ್ಕೆ ತಕ್ಕಂತೆ ಓದಿನಲ್ಲಿ ತೊಡಗಿ ಅತ್ಯುತ್ತಮ ವಿದ್ಯಾರ್ಥಿನಿ ಬಿರುದಿನ ಜತೆಗೆ ಚಿನ್ನದ ಪದಕ ಪಡೆದು ತಂದೆ-ತಾಯಿಯ ಶ್ರಮ ವ್ಯರ್ಥವಾಗದಂತೆ ಮಾಡಿದ್ದಾಳೆ.
ನನ್ನ ಸಾಧನೆಗೆ ತಾಯಿಯ ಶ್ರಮವೇ ಸ್ಫೂರ್ತಿ. ತಾಯಿಯ ದುಡಿಮೆ, ಅವಳು ರೂಢಿಸಿಕೊಂಡ ಪ್ರಾಮಾಣಿಕತೆ, ಒಳ್ಳೆಯವರಾಗಿ ಬಾಳಬೇಕು ಎನ್ನುವ ವಿಚಾರಗಳೇ ನನ್ನ ಓದಿಗೆ ಸದಾ ಸ್ಫೂರ್ತಿ. ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಇತರರ ಮಾರ್ಗದರ್ಶನದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ. ಹಳ್ಳಿ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂತವರಿಗೆ ಓದಿನ ರುಚಿ ಹತ್ತಿಸಿದ ಧಾರವಾಡದ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಜಯಶ್ರೀ ತಳವಾರ.