

ಹುಬ್ಬಳ್ಳಿ: ಇಲ್ಲಿಯ ಸಾಯಿನಗರದ ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲ ಸೋಮವಾರ ಬೆಳಗಿನ ಜಾವ 1.30ಕ್ಕೆ ಸ್ಫೋಟಗೊಂಡಿದೆ. 9ಜನ ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸಾಯಿನಗರದ ನಿವಾಸಿಗಳಾದ ವಿನಾಯಕ ಬಾರಕೇರ (12) ಶೇ. 25, ಪ್ರಕಾಶ ಬಾರಕೇರ (42) ಶೇ. 91, ತೇಜಸ್ ರೆಡ್ಡಿ (26) ಶೇ. 74, ಶಂಕರ ರಾಯನಗೌಡ್ರ (29) ಶೇ.99, ಪ್ರವೀಣ ಚಲವಾದಿ (24) ಶೇ. 86, ಅಜ್ಜಾಸ್ವಾಮಿ (58) ಶೇ. 86, ರಾಜು ಹರ್ಲಾಪುರ (21) ಶೇ. 74, ಸಂಜಯ ಸವದತ್ತಿ (20) ಶೇ. 89 ಹಾಗೂ ಮಂಜುನಾಥ ತೋರದ (22) ಅವರಿಗೆ ಶೇ. 70ರಷ್ಟು ಸುಟ್ಟಗಾಯಗಳಾಗಿವೆ. ವಿನಾಯಕ ಹೊರತುಪಡಿಸಿ ಉಳಿದೆಂಟು ಜನರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸೇರಿದಂತೆ ಜನಪ್ರತಿನಿಧಿಗಳು ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಉತ್ತಮ ಚಿಕಿತ್ಸೆ ನೀಡುವಂತೆ ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅವರಿಗೆ ಸೂಚಿಸಿದರು.
ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗಾಯಗೊಂಡವರ ಆರೋಗ್ಯದ ಮಾಹಿತಿ ತಿಳಿದುಕೊಳ್ಳಲು ಕುಟುಂಬದವರು ಪರದಾಡುತ್ತಿದ್ದರು.
ಘಟನೆ ವಿವರ: ಕಳೆದ ಆರೇಳು ವರ್ಷಗಳಿಂದ ಅಚ್ಚವ್ವನ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಕೆಲವರು ವೃತಾಚರಣೆ ಮಾಡುತ್ತಿದ್ದರು. ಈ ಬಾರಿ 14 ಜನ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ವೃತ ಅಚರಿಸುತ್ತಿದ್ದರು. ಈಶ್ವರ ದೇವಸ್ಥಾನದಲ್ಲಿಯೇ ವಾಸ್ತವ್ಯ ಹೂಡಿದ್ದರು. ಕಳೆದ ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿ ಉರುಳಿದೆ. ಇದರ ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿದೆ. ದೇವಸ್ಥಾನದಲ್ಲಿ ಹಚ್ಚಿದ್ದ ದೀಪಕ್ಕೆ ಅಡುಗೆ ಅನಿಲ ತಗುಲಿದೆ. ಆಗ ಒಮ್ಮೆಲೆ ದೇವಸ್ಥಾನದ ಪ್ರಾಂಗಣದಲ್ಲಿ ಬೆಂಕಿ ಹೊತ್ತುಕೊಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ 9 ಜನ ಮಾಲಾಧಾರಿಗಳು ಅಯ್ಯಪ್ಪನ ಸನ್ನಿಧಿಯಿದ್ದ ದೇವಸ್ಥಾನದ ಮೇಲಿನ ಕಟ್ಟಡದಲ್ಲಿ ಮಲಗಿದ್ದರು. 5 ಜನ ಕೆಳಗಿನ ಕೊಠಡಿಯಲ್ಲಿ ಮಲಗಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ತಪ್ಪಿಸಿಕೊಳ್ಳಲು ಆರು ಜನ ಮಾಲಾಧಾರಿಗಳು ಮೇಲಿನಿಂದ ಕೆಳಗೆ ಜಿಗಿದಿದ್ದಾರೆ. ಉಳಿದ ಮೂವರು ಕೊಠಡಿಯಲ್ಲಿ ಲಾಕ್ ಆಗಿದ್ದು, ಅಪಾರ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು 9 ಮಾಲಾಧಾರಿಗಳನ್ನು ರಕ್ಷಿಸಿ ರಾತ್ರಿ 1.40ರ ಸುಮಾರಿಗೆ ಕೆಎಂಸಿಆರ್‌ಐನಲ್ಲಿ ದಾಖಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.