

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಕುರಿ ಮತ್ತು ಮೇಕೆ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಕುರಿಗಾಹಿಗಳು ಅನುಭವಿಸುವ ಸಂಕಷ್ಟ ನಿವಾರಣೆಗೆ ಪ್ರಾರಂಭಿಸಿದ್ದ ‘ಅನುಗ್ರಹ’ ಯೋಜನೆಗೆ ಹಾವೇರಿ ಜಿಲ್ಲೆ ಸೇರಿ ರಾಜ್ಯದಲ್ಲಿಯೇ ಗ್ರಹಣ ಹಿಡಿದಿದೆ.
ಈ ಯೋಜನೆ ಹಿಂದಿನ ಸರ್ಕಾರದಲ್ಲಿ ನಿರ್ಲಕ್ಷೃಕ್ಕೆ ಒಳಗಾಗಿದ್ದರಿಂದ ಕುರಿ ಹಾಗೂ ಮೇಕೆಗಳು ಮೃತಪಟ್ಟು ಎರಡೂ ವರ್ಷ ಕಳೆಯುತ್ತ ಬಂದರೂ ಸಾಕಣೆದಾರರಿಗೆ ಈವರೆಗೂ ಪರಿಹಾರದ ಹಣ ಸಿಕ್ಕಿಲ್ಲ. ರಾಣೆಬೆನ್ನೂರ ಸೇರಿ ಜಿಲ್ಲೆಯಲ್ಲಿ 2021 ನವೆಂಬರ್‌ನಿಂದ 2023 ಮಾರ್ಚ್‌ವರೆಗೆ 17,828 ಕುರಿ ಮತ್ತು ಮೇಕೆಗಳು ಹಾಗೂ 536 ಕುರಿ ಮತ್ತು ಮೇಕೆಯ ಮರಿಗಳು ಮೃತಪಟ್ಟಿವೆ. ಇವುಗಳ ಒಟ್ಟು ಪರಿಹಾರ 9.80 ಕೋಟಿ ರೂ.ಗೂ ಅಧಿಕ ಬಾಕಿಯಿದೆ. ಕಳೆದ ಎರಡು ವರ್ಷದಿಂದ ಹಣ ಬಿಡುಗಡೆಯಾಗದ ಕಾರಣ ಕುರಿ ಮತ್ತು ಮೇಕೆ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಕುರಿ ಮತ್ತು ಮೇಕೆಗಳು ರೋಗಗಳಿಂದ ಮೃತಪಡುತ್ತಿವೆ. ಬೀದಿನಾಯಿಗಳು, ಚಿರತೆಗಳ ದಾಳಿಗೂ ಬಲಿಯಾಗುತ್ತಿವೆ. ವಿಷಪೂರಿತ ಆಹಾರ ಸೇವಿಸಿ ಹಾಗೂ ಕೆಲವು ಬಾರಿ ಸಿಡಿಲು ಬಡಿದು ಮೃತಪಟ್ಟಿರುವ ಉದಾಹರಣೆಗಳೂ ಇವೆ. ಅನುಗ್ರಹ ಯೋಜನೆಯಡಿ 3ರಿಂದ 6 ತಿಂಗಳ ಕುರಿ ಮತ್ತು ಮೇಕೆ ಮರಿಗಳು ಮೃತಪಟ್ಟರೆ 3,500 ಹಾಗೂ 6 ತಿಂಗಳು ಮೇಲ್ಪಟ್ಟ ಕುರಿ ಮೇಕೆಗಳಿಗೆ 5 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಆದರೆ, ಜಿಲ್ಲೆಯಲ್ಲಿ 2021 ನವೆಂಬರ್‌ವರೆಗೆ ಪರಿಹಾರ ವಿತರಣೆ ಆಗಿದ್ದನ್ನು ಬಿಟ್ಟರೆ, ನಂತರದಲ್ಲಿ ಪರಿಹಾರ ವಿತರಣೆ ಆಗಿಲ್ಲ. 2022-23ನೇ ಸಾಲಿನಿಂದ ಸರ್ಕಾರ ಹಣ ಬಿಡುಗಡೆ ಮಾಡುವುದನ್ನೇ ನಿಲ್ಲಿಸಿತು.
2021ರ ನವೆಂಬರ್‌ನಿಂದ 2022 ಮಾರ್ಚ್ 31ರವರೆಗೆ 5836 ಕುರಿ, ಮೇಕೆ ಹಾಗೂ ಮರಿಗಳು ಮೃತಪಟ್ಟಿವೆ. 2022ರ ಏಪ್ರಿಲ್ 1ರಿಂದ 2023ರ ಮಾರ್ಚ್ 31ರವರೆಗೆ ಜಿಲ್ಲೆಯಲ್ಲಿ 9475 ಕುರಿಗಳು, 2104 ಮೇಕೆಗಳು ಸೇರಿ 11,579 ಹಾಗೂ 262 ಕುರಿ ಮರಿಗಳು, 151 ಮೇಕೆ ಮರಿಗಳು ಸೇರಿ 413 ಮೃತಪಟ್ಟಿವೆ. ಈ ಎಲ್ಲ ಸೇರಿ ಒಟ್ಟು 17,828 ಮೃತಪಟ್ಟಿದ್ದು, ಇದರ ಪರಿಹಾರ ಹಣಕ್ಕಾಗಿ 11,273 ಫಲಾನುಭವಿಗಳು ಚಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅನುಗ್ರಹ ಕೊಡುಗೆ ಯೋಜನೆ ಜಾರಿಗೆ ತರಲಾಗಿತ್ತು. ಆರಂಭದ ಒಂದಷ್ಟು ವರ್ಷ ಯೋಜನೆ ಉತ್ತಮವಾಗಿ ನಡೆಯಿತು. ಆನಂತರ ಯಡಿಯೂರಪ್ಪರವರ ಸರ್ಕಾರವೂ ಯೋಜನೆಯನ್ನು ಮುನ್ನ ಡೆಸಿಕೊಂಡು ಬಂದರು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಯೋಜನೆ ಹೆಸರಿಗೆ ಮಾತ್ರ ಜಾರಿಯಲ್ಲಿತ್ತು. ಕಳೆದ ಒಂದು ವರ್ಷದಿಂದ ಫಲಾನುಭವಿಗಳಿಗೆ ಪರಿಹಾರ ಹಣ ಬಿಡುಗಡೆ ಮಾಡದೆ ಸರ್ಕಾರ ಬಾಕಿ ಉಳಿಸಿಕೊಂಡಿದೆ.
ಹಿಂದಿನ ಸರ್ಕಾರ ಅನುಗ್ರಹ ಕೊಡುಗೆ ಯೋಜನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಆದರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಂದಿದ್ದು, ಕೂಡಲೇ ಕುರಿಗಾಹಿಗಳಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂಬುದು ಕುರಿಗಾಹಿಗಳ ಆಗ್ರಹವಾಗಿದೆ.
ಸಿಎಂ ಸಿದ್ದರಾಮಯ್ಯನವರು ಕೂಡಲೇ ಹಾವೇರಿ ಸೇರಿ ರಾಜ್ಯಾದ್ಯಂತ ಅನುಗ್ರಹ ಯೋಜನೆಯಡಿ ಮೃತಪಟ್ಟ ಕುರಿಗಳ ಮಾಲೀಕರಿಗೆ ಪರಿಹಾರ ಬಿಡುಗಡೆ ಮಾಡಬೇಕು. ಜತೆಗೆ ನಾನು ಈ ಬಾರಿ ಸಿಎಂ ಆದರೆ ಅನುಗ್ರಹ ಯೋಜನೆಯ ಮೊತ್ತವನ್ನು 10 ಸಾವಿರ ರೂ.ಗೆ ಏರಿಕೆ ಮಾಡುವೆ ಎಂದು ಹೇಳಿದ್ದರು. ಅದನ್ನು ಆದಷ್ಟು ಬೇಗ ಜಾರಿಗೊಳಿಸಬೇಕು. ನೀಲಪ್ಪ ದೇವರಗುಡ್ಡ ಕುರಿ ಉತ್ಪಾದಕರ ಸಂಘದ ತಾಲೂಕು ಅಧ್ಯಕ್ಷ ರಾಣೆಬೆನ್ನೂರ ಜಿಲ್ಲೆಯಲ್ಲಿ 2022-23ನೇ ಸಾಲಿನ ಅನುಗ್ರಹ ಕೊಡುಗೆ ಯೋಜನೆಯಡಿ ಕುರಿ ಮೇಕೆಗಳ ಆಕಸ್ಮಿಕ ಮರಣದ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲಾತಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅಲ್ಲಿಂದ ಹಣ ಬಿಡುಗಡೆಯಾದ ಕೂಡಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.ಡಾ. ಶಂಭುಲಿಂಗಪ್ಪ ಬಡ್ಡಿಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ನಿಗಮ ಹಾವೇರಿ