ಶಿರಸಿ ಅರ್ಬನ್ ಬ್ಯಾಂಕ್​ಗೆ 9.20 ಕೋಟಿ ಲಾಭ

17sirsi2aurban bank
Published on

ಶಿರಸಿ: ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಆದ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 2022-23ನೇ ಸಾಲಿನಲ್ಲಿ 9.20 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಜಯದೇವ ನಿಲೇಕಣಿ ತಿಳಿಸಿದರು.

ನಗರದ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ಶನಿವಾರ ಬ್ಯಾಂಕ್ ಸರ್ವಸಾಧಾರಣ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಬ್ಯಾಂಕ್ ತನ್ನ ಒಟ್ಟು ವ್ಯವಹಾರವನ್ನು 1883 ಕೋಟಿ ರೂ.ಗಳಿಗೆ ದಾಖಲಿಸಿಕೊಂಡಿರುವುದನ್ನು ಸದಸ್ಯರು ಸಭೆಯಲ್ಲಿ ಶ್ಲಾಘಿಸಿದರು.

ಬ್ಯಾಂಕ್ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟೂ ಠೇವಣಿಯನ್ನು 1135 ಕೋಟಿ ರೂ.ಗಳಿಗೆ, ದುಡಿಯುವ ಬಂಡವಾಳವನ್ನು 1318 ಕೋಟಿ ರೂ.ಗಳಿಗೆ ಹೆಚ್ಚಿಸುವುದರೊಂದಿಗೆ 9.20 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿ ಪ್ರಗತಿಯ ನಾಗಾಲೋಟವನ್ನು ಮುಂದುವರಿಸಿಕೊಂಡು ಬಂದಿದೆ. ಬ್ಯಾಂಕಿನ ಸದಸ್ಯರ ಸಂಖ್ಯೆ 46,000 ದಾಟಿದ್ದು, ಸಂದಾಯಿತ ಶೇರು ಬಂಡವಾಳ ರೂ.3027ಕೋಟಿ ತಲುಪಿದೆ. ಕಳೆದ ವರ್ಷದ 90.99 ಕೋಟಿ ರೂ. ಆದಾಯವನ್ನು 98.56 ಕೋಟಿ ರೂ. ಗಳಿಗೆ ಬ್ಯಾಂಕ್ ಹೆಚ್ಚಿಸಿದೆ. ಈ ಆರ್ಥಿಕ ವರ್ಷದಲ್ಲಿಯೂ ಕೂಡ ಬ್ಯಾಂಕ್ ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವು ಸೊನ್ನೆ ಪ್ರತಿಶತ ಇದೆ ಎಂದು ಸಭೆಯಲ್ಲಿ ತಿಳಿಸಿದರು.

ಬ್ಯಾಂಕು ಕಳೆದ 5 ವರ್ಷಗಳಲ್ಲಿ ತನ್ನ ವ್ಯವಹಾರವನ್ನು 891ಕೋಟಿ ರೂ.ಗಳಿಂದ 1883 ಕೋಟಿ ರೂ.ಗಳಿಗೆ ಅಭಿವೃದ್ಧಿಗೊಳಿಸಿರುವುದು ಬ್ಯಾಂಕ್ ಸದೃಢವಾಗಿ ಪ್ರಗತಿಯತ್ತ ಸಾಗುವ ಸಂಕೇತವಾಗಿದೆ ಎಂದು ತಿಳಿಸಿದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಬ್ಯಾಂಕಿನ ಪ್ರಗತಿಯ ಕುರಿತು ಸ್ಥೂಲ ಚಿತ್ರಣ ನೀಡಿದರು. ಶಾಸಕ, ಬ್ಯಾಂಕ್ ಸದಸ್ಯರಾದ ಭೀಮಣ್ಣ ಟಿ. ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net