

ಬಾಳೆಹೊನ್ನೂರು: ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 9.01ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಎನ್.ಶ್ವೇತಾ ತಿಳಿಸಿದರು.
ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘ ಕಳೆದ 47 ವರ್ಷಗಳಿಂದ ರೈತರು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಮಾದರಿ ಸಂಘವಾಗಿ ಬೆಳೆದಿದೆ ಎಂದರು.
ರೈತರಿಗೆ ಅಗತ್ಯವಿರುವ ಕೃಷಿ ಸಾಲ, ಗೊಬ್ಬರ ಸಾಲ, ವಾಹನ, ಗೃಹ ನಿರ್ಮಾಣ, ದಾಸ್ತಾನು ಸಾಲ ಸೇರಿದಂತೆ ವಿವಿಧ ಬಗೆಯ ಸಾಲಗಳನ್ನು ನೀಡುತ್ತ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಯಲ್ಲಿ ಷೇರುದಾರರು, ರೈತರು ಹಾಗೂ ಗ್ರಾಹಕರ ಅಪಾರ ಶ್ರಮವಿದೆ ಎಂದು ತಿಳಿಸಿದರು.
ರೈತರು, ಗ್ರಾಹಕರ ಆಶಯಗಳಿಗೆ ತಕ್ಕಂತೆ ಸಹಕಾರ ಸಂಘಮುನ್ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಸಂಘ ಕಳೆದ ಸಾಲಿನ ಪಡೆದ ಲಾಭಾಂಶದಲ್ಲಿ ಶೇ.8 ಮೊತ್ತವನ್ನು ಷೇರುದಾರರಿಗೆ ಡಿವಿಡೆಂಟ್ ನೀಡಲು ಉದ್ದೇಶ ಹೊಂದಿದೆ ಎಂದರು.
ಸಂಘದ ಹಿರಿಯ ಷೇರುದಾರ ಸದಸ್ಯರಾದ ಎಚ್.ವಿ.ಶಿವಾನಂದ ರಾವ್, ವಿದ್ಯಾಧರ ಹೆಬ್ಬಾರ್ ಮಹಾಸಭೆ ಉದ್ಘಾಟಿಸಿದರು. ಉಪಾಧ್ಯಕ್ಷ ಕೆ.ಎಚ್.ರತ್ನಾಕರ್, ನಿರ್ದೇಶಕರಾದ ಎಸ್.ಎನ್.ನಾರಾಯಣ, ಕೆ.ಎಸ್.ಸುಭಾಶ್, ಎಚ್.ಎಚ್.ದಯಾನಂದ, ಕೆ.ಸಿ.ಕಳಸಪ್ಪನಾಯ್ಕ, ಕೆ.ಎಂ.ಪ್ರಭಾಕರ, ರಾಜು ಪೂಜಾರಿ, ಪುಟ್ಟಪ್ಪ ಪೂಜಾರಿ, ಸುಧಾಮಣಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಂ.ಡಿ.ರಾಜೇಶ್, ಸಿಇಒ ಸಂತೋಷ್‌ಕುಮಾರ್, ಸಿಬ್ಬಂದಿಗಳಾದ ಆದರ್ಶ, ಅನ್ವಿತ್, ಸದಾನಂದ, ಅರುಣ್‌ಕುಮಾರ್ ಮತ್ತಿತರರು ಇದ್ದರು