8ರಂದು ಹೆದ್ದಾರಿ ತಡೆ ಹೋರಾಟ: ಅಮಿತ್ ಷಾ ಕ್ಷಮೆ ಕೋರಲು ಆಗ್ರಹಿಸಿ ಪ್ರತಿಭಟನೆ ಎಂದ ಎಚ್.ಕೆ. ಸಂದೇಶ್

H.K. SANDHESH-press meet (2)
Published on

ಹಾಸನ: ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಜ.8ರಂದು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಹೇಳಿದರು.

ರಾಜ್ಯಸಭೆಯಲ್ಲಿ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಬಗ್ಗೆ ವ್ಯಂಗ್ಯ ಹಾಗೂ ಲಘುವಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಬದಲು ದೇವರ ನಾಮ ಜಪ ಮಾಡಿದ್ದರೆ ಮೋಕ್ಷ ಸಿಗುತ್ತಿತ್ತು ಎಂದು ಹೇಳಿ ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ. ಸಂವಿಧಾನದ ಆಶಯದಂತೆ ಕೆಲಸ ಮಾಡುವೆ ಎಂದು ಪ್ರಮಾಣವಚನ ಸ್ವೀಕರಿಸಿ ಈಗ ಅದೇ ಸಂವಿಧಾನ ಕರ್ತೃಗೆ ಅವಮಾನ ಮಾಡಿರುವ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಿಪಿಐಎಂ ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳ ಸಮ್ಮುಖದಲ್ಲಿ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಂಡಿದ್ದು, ಒಂದು ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ನಮ್ಮನ್ನು ಬಂಧಿಸಿದರೂ ಹೋರಾಟ ನಿಲ್ಲದು. ಅಂಬೇಡ್ಕರ್ ಬಗ್ಗೆ ನಾಲಗೆ ಹರಿಬಿಡುವ ಮುನ್ನ ಎಚ್ಚರಿಕೆ ಇರಬೇಕು. ಆದರೆ ಇದನ್ನು ಅರಿಯದೆ ಮಾತನಾಡಿರುವ ಅಮಿತ್ ಷಾ ಅವರನ್ನು ಪ್ರಧಾನಿ ಅವರು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಮುಂದೆ ಹಾಸಸ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ತಾವಾಡಿದ ಬಾಲಿಶ ಮಾತಿಗೆ ಕನಿಷ್ಠ ಕ್ಷಮೆ ಕೇಳದ ಸೌಜನ್ಯ ತೋರದ ಅಮಿತ್ ಷಾ ಉದ್ದಟತನಕ್ಕೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ತಮ್ಮ ಹೋರಾಟದ ಮೂಲಕವೇ ಉತ್ತರ ನೀಡಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಂ.ಸೋಮಶೇಖರ್, ರಾಜಶೇಖರ್, ಮಲ್ಲೇಶ್ ಅಂಬುಗ, ಸಮೀರ್, ವಿಜಯ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net