

ಹನೂರು: ಸಮುದಾಯದ ಮುಖಂಡರ ಇಚ್ಛೆಯಂತೆ ಜು.8 ರಂದು ಹಡಪದ ಅಪ್ಪಣ್ಣ ಜಯಂತಿ ಆಚರಿಸಲು ತೀರ್ಮಾನಿಸಲಾಗಿದ್ದು, ಆದ್ದರಿಂದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಎಂ.ಆರ್ ಮಂಜುನಾಥ್ ಸೂಚಿಸಿದರು.
ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಂಬಂಧ ಶನಿವಾರ ಸಂಜೆ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದು, ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಈ ದಿಸೆಯಲ್ಲಿ ಸರ್ಕಾರದ ಆದೇಶದಂತೆ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇವರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಆದ್ದರಿಂದ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪ್ರಭಾರ ತಹಸೀಲ್ದಾರ್ ಧನಂಜಯ, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಹದೇವಸ್ವಾಮಿ, ಶಿಕ್ಷಣ ಸಂಯೋಜಕ ಕಿರಣ್‌ಕುಮಾರ್, ತಾಲೂಕು ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಜು, ಅಧ್ಯಕ್ಷ ಮಹದೇವ, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಕುಮಾರ್, ಖಜಾಂಚಿ ಗುರು, ಮುಖಂಡರಾದ ವೆಂಕಟೇಶ್, ರಾಜೇಶ್, ವೆಂಕಟೇಶ್, ರಾಜೇಶ್, ಪಾಂಡು, ರವಿ ಇತರರು ಇದ್ದರು.