

ವಿರಾಜಪೇಟೆ: ಬಾಳುಗೋಡು ಪೈಸಾರಿಯಲ್ಲಿ ಸುಮಾರು 55 ಕುಟುಂಬಗಳು ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ರಾಜ್ಯದ ವಿವಿಧ ಸಂಘಟನೆಗಳ ನಾಯಕರು ಸೋಮವಾರ ಭೇಟಿ ನೀಡಿ ಕೆಲಕಾಲ ಮುಷ್ಕರ ನಡೆಸಿದರಲ್ಲದೆ ನಿರಾಶ್ರಿತರಿಗೆ ಸರ್ಕಾರ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಕಳೆದ 7 ದಿನಗಳಿಂದ ಆರ್ಜಿ, ಪೆರುಂಬಾಡಿ, ವೀರಾಜಪೇಟೆ ಪಟ್ಟಣದ ಸುತ್ತಮುತ್ತಲಿನ ಪ್ರದೇಶದ ವಸತಿರಹಿತರು, ನಿರ್ಗತಿಕರು ಸೇರಿದಂತೆ ಒಟ್ಟು 55 ಕುಟುಂಬಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ಅಂತಿಮ ನಿಲುವಿಗಾಗಿ ಕಾಯುತ್ತಿದ್ದಾರೆ. ಜಾಗದ ಅಳತೆ ಮಾಡಿ ಹಕ್ಕುಪತ್ರ ನೀಡದ ಹೊರತು ಕುಟುಂಬಗಳು ಜಾಗ ಬಿಟ್ಟು ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ರಾಜ್ಯ ಬಹುಜನ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮೊಣ್ಣಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ನ್ಯಾಯ ಸಮ್ಮತವಾದದ್ದು, ವಸತಿ ರಹಿತ ಕಾರ್ಮಿಕರು ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿದ್ದು ಸರ್ಕಾರ ವಸತಿ ರಹಿತರನ್ನು ಗುರುತಿಸಿ ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿದರು. ಇವರೊಂದಿಗೆ ಭೂಮಿ ವಸತಿ ಹಕ್ಕು ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹೇಮಂತ್ ಅವರು ಪ್ರತಿಭಟನಾಕಾರರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.
ರಾಜ್ಯ ಮಡಿಲು ಯೋಜನೆಯ ಆದಿವಾಸಿ ಅಲೆಮಾರಿ ಬುಡಕಟ್ಟು ಮಕ್ಕಳ ಶಿಕ್ಷಣ ಅಭಿವೃದ್ಧಿ ಸಂಘಟನೆಯ ಅರಸು, ಮಡಿಲು ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕರಾದ ಮುತ್ತುರಾಜು, ಆದಿವಾಸಿ ಎರವರ ಸಂಘಟನೆಯ ತಾಯಮ್ಮ ಭೇಟಿ ನೀಡಿ ವಸತಿ ರಹಿತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತಿ ಸಮಿತಿ ಅಧ್ಯಕ್ಷ ಕೆ.ಪಳನಿ ಪ್ರಕಾಶ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಹಾಗೂ ಜಿಲ್ಲಾ ನಾಯಕರಿಗೆ ವಸತಿ ರಹಿತರು ಹಮ್ಮಿಕೊಂಡಿರುವ ಪ್ರತಿಭಟನೆಯ ಉದ್ದೇಶ ಹಾಗೂ ಕಂದಾಯ ಅಧಿಕಾರಿಗಳ ಬೆದರಿಕೆ ಕುರಿತು ಮಾಹಿತಿ ನೀಡಿದರು. ಸ್ಥಳದಲ್ಲಿಯೇ ಇದ್ದ ಎಚ್.ಕೆ. ರಾಜು, ಧರ್ಮ, ಸೌಮ್ಯಾ, ಶಿಲ್ಪಾ, ಶರತ್, ಅಕ್ಷಯ್, ಶೋಭಾ ಹಾಗೂ ಇನ್ನಿತರ ವಸತಿ ರಹಿತ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿದರು.