ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ವ್ರತ: ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

30
Published on

ಮೈಸೂರು: ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿ 8ನೇ ಚಾತುರ್ಮಾಸ್ಯ ವ್ರತ ನಡೆಸಲು ನಿರ್ಧರಿಸಿರುವುದಾಗಿ ಶ್ರೀವ್ಯಾಸರಾಜರ ಮಠದ ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ನ್ಯಾಯ ಸುಧಾ ಮಂಗಳ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಬುಧವಾರ ಕೃಷ್ಣಮೂರ್ತಿ ಪುರಂನ ಶ್ರೀವ್ಯಾಸ ತೀರ್ಥ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಧನ್ಯತಾ ಸಮರ್ಪಣೆ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವ್ಯಾಸರಾಜರ ಮಠದ ಪರಂಪರೆಯಲ್ಲಿ ಸೋಸಲೆಗೆ ಮಹತ್ವದ ಸ್ಥಾನವಿದೆ. ಚಾತುರ್ಮಾಸದ ಅವಧಿಯಲ್ಲಿ ಎಲ್ಲ ಭಕ್ತರೂ ಕ್ಷೇತ್ರಕ್ಕೆ ಆಗಮಿಸಿ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎನ್ನುವ ಆಶಯ ಇದೆ. ಆಗಸ್ಟ್ 2 ರಿಂದ ಸೆಪ್ಟೆಂಬರ್ 18ರ ವರೆಗೆ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗ ಚತುರ್ಥಿ, ಪಂಚಮಿ, ವರಮಹಾಲಕ್ಷ್ಮೀ ವ್ರತ, ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವ, ಕೃಷ್ಣ ಜಯಂತಿ, ಗಣೇಶ ಚೌತಿ, ಅನಂತ ವ್ರತ, ಸೀಮೋಲ್ಲಂಘನ ನೆರವೇರಲಿದೆ. ಮುದ್ರಾಧಾರಣೆ, ಭಕ್ತರಿಗೆ ಫಲ ಮಂತ್ರಾಕ್ಷತೆ ಅನುಗ್ರಹವೂ ಇರಲಿದೆ. ಚಾತುರ್ಮಾಸ್ಯ ಅವಧಿಯಲ್ಲಿ ಎಲ್ಲ ವ್ರತ, ನಿಯಮಗಳನ್ನು ಇದೇ ಕ್ಷೇತ್ರದಲ್ಲಿ ಆಚರಿಸಲು ಸಂಸ್ಥಾನ ನಿರ್ಧರಿಸಿದ್ದು, ಭಕ್ತರು ಸತ್ಕಾರ್ಯ ಸಾಧನೆಗೆ ಸಂಗಮಿಸಬೇಕು ಎಂದರು.
ದೈವ ಕೃಪೆ ಮತ್ತು ಗುರು ಶ್ರೀವ್ಯಾಸತೀರ್ಥರ ಪರಮ ಅನುಗ್ರಹದಿಂದ ಶ್ರೀನ್ಯಾಯ ಸುಧಾ ಮಂಗಳ ಮಹೋತ್ಸವ ಯಶಗೊಂಡಿದೆ. 9 ದಿನಗಳ ಮಹೋತ್ಸವದ ಹಿನ್ನೆಲೆಯಲ್ಲಿ 25ಕ್ಕೂ ಹೆಚ್ಚು ವಿವಿಧ ಮಠಾಧಿಪತಿಗಳು, ರಾಜ್ಯ ಮತ್ತು ಹೊರ ರಾಜ್ಯಗಳ ಸಾವಿರಾರು ಭಕ್ತರು ಸಂಗಮಿಸಿದ್ದರು. ನಮ್ಮ ವಿದ್ಯಾಪೀಠದ 4 ಯುವಕರು ವಿದ್ವತ್ ಸಭೆಯಲ್ಲಿ ಶ್ರೀಮನ್ ನ್ಯಾಯ ಸುಧಾ ಮತ್ತು ವ್ಯಾಸತ್ರಯ ಗ್ರಂಥಗಳ ಪರೀಕ್ಷೆ ಎದುರಿಸಿ ಸುಧಾ ಪಂಡಿತರೆಂದು ಮಾನ್ಯರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ. ಮಧುಸೂದನ ಆಚಾರ್ಯ, ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ, ಬೆಂಗಳೂರಿನ ಪೇಜಾವರ ವಿದ್ಯಾಪೀಠದ ಪ್ರಾಧ್ಯಾಪಕ ವಿದ್ವಾನ್ ಮಾತರಿಶ್ವ ಆಚಾರ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಗೋ. ಮಧುಸೂದನ, ಜನ ಸೇವಾ ಕೇಂದ್ರದ ಮುಖ್ಯಸ್ಥ ಮಧುಸೂದನ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net