ಚೌಡೇಶ್ವರಿ ದೇವಾಲಯದಲ್ಲಿ ವಾರ್ಷಿಕೋತ್ಸವದ ಸಂಭ್ರಮ: ಭಕ್ತಿ ಗೀತೆಗಳ ಪುಸ್ತಕ ಬಿಡುಗಡೆ ಮಾಡಿದ ದಿವ್ಯ ಜ್ಞಾನನಂದಗಿರಿ ಸ್ವಾಮೀಜಿ

8th Anniversary of Choudeshwari Ammanavara Temple mandya
Published on

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಹೇಮಗಿರಿ ರಸ್ತೆಯ ಚೌಡೇಶ್ವರಿ ದೇವಾಲಯದಲ್ಲಿ ತಾಯಿ ಚೌಡೇಶ್ವರಿ ಅಮ್ಮನವರ ದೇವಾಲಯದ 8ನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.

ದೊಡ್ಡಬಳ್ಳಾಪುರದ ತಪಸಿಹಳ್ಳಿಯ ನೇಕಾರ ತೊಗಟವೀರ ಗುರು ಪೀಠದ ಪೀಠಾಧ್ಯಕ್ಷ ದಿವ್ಯ ಜ್ಞಾನನಂದಗಿರಿ ಸ್ವಾಮೀಜಿ ಸಾನಿಧ್ಯದಲ್ಲಿ ತಾಯಿ ಚೌಡೇಶ್ವರಿ ದೇವಿ ಶಿಲಾ ಮೂರ್ತಿಗೆ ವಿಶೇಷ ಪೂಜೆ ಹಾಗೂ ಉತ್ಸವ ಮೂರ್ತಿ ಪ್ರಾಕಾರೋತ್ಸವ ಆಚರಣೆಗಳು ನಡೆದವು.

ಈ ವೇಳೆ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ದೈವ ಕೃಪೆಯಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರಕುತ್ತದೆ. ಸಾಧನೆ ಮಾಡಲು ಭಕ್ತಿ ಮಾರ್ಗ ತುಸು ಕಷ್ಟವಾದರೂ ಧರ್ಮದ ಮಾರ್ಗದಲ್ಲಿಯೇ ಸಾಗಿ ಗುರಿ ಮುಟ್ಟಬೇಕು. ಭಗವಂತನ ಒಲುಮೆಗೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ನಿಜವಾದ ಭಕ್ತಿ ಹಾಗೂ ಶ್ರದ್ದೆ ಯಿಂದ ಪೂಜಿಸಿ ಆರಾಧಿಸಿದರೆ ಭಗವಂತನು ಒಲಿಯುತ್ತಾನೆ. ಆದ್ದರಿಂದ ಮಾನವನು ತನ್ನಲ್ಲಿನ ಕೀಳರಿಮೆ ಅಳಿಸಿಹಾಕಿ ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕವಿ ಮಾರೇನಹಳ್ಳಿ ಲೋಕೇಶ್ ಮಾತನಾಡಿ, ಚೌಡೇಶ್ವರಿ ಅಮ್ಮನವರ ದೇವಾಲಯದ ನೈಜ ಘಟನೆಗಳು ಹಾಗೂ ದೇವಿ ಶಕ್ತಿಯ ಕುರಿತ ವಿಷಯಗಳ ಕುರಿತು ಭಕ್ತಿ ಗೀತೆಗಳನ್ನು ರಚಿಸಲಾಗಿದೆ. ಭಕ್ತರು ಭಕ್ತಿ ಗೀತೆಗಳ ಪುಸ್ತಕಗಳನ್ನು ಖರೀದಿ ಮಾಡಿ ದೇವಿಯ ಶಕ್ತಿಯ ಬಗ್ಗೆ ಅರಿವು ಹೊಂದುವ ಮೂಲಕ ಜ್ಞಾನವಂತರಾಗಿ ದ್ವೇಷ ಅಸೂಯೆಯನ್ನು ಹೊಡೆದೋಡಿಸಿ ಪ್ರೀತಿ ಪ್ರೇಮದಿಂದ ಕೂಡಿರುವ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ಸಮಾಜ ಸೇವಕ ಹೊಸಹೊಳಲು ಸೋಮಶೇಖರ್, ನೇಕಾರ ತೊಗಟವೀರ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳಾದ ಕೆ.ಆರ್.ನಾಗರಾಜಶೆಟ್ಟಿ, ಎಚ್.ಎಂ.ಚಂದ್ರಶೇಖರ್, ಸುರೇಶ್, ನಿರ್ದೇಶಕರಾದ ಕುಮಾರಸ್ವಾಮಿ, ಕೆ.ಸಿ.ವಾಸು, ಕೆ.ಎಚ್.ರಾಮಕೃಷ್ಣ ಮಾಸ್ಟರ್, ಕೆ.ಎಸ್.ಮೋಹನಕುಮಾರ್, ಶಾರದಾ ಗೋಪಿಚಂದ್, ಪರಿಮಳಾ ನಾಗರಾಜಶೆಟ್ಟಿ, ಇಂಜಿನಿಯರ್ ವೆಂಕಟೇಶ್ ಇತರರಿದ್ದರು.

ಇದೇ ವೇಳೆ ಕವಿ ಮಾರೇನಹಳ್ಳಿ ಲೋಕೇಶ್ ವಿರಚಿತ ಚಾಮುಂಡೇಶ್ವರಿ ಭಕ್ತಿ ಗೀತೆಗಳ ಕುರಿತ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಅಂತೆಯೇ ವಾರ್ಷಿಕೋತ್ಸವದ ಅಂಗವಾಗಿ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net