

ಕಾರವಾರ: ಜಿಲ್ಲೆಯಲ್ಲಿ ಸೋಮವಾರ ಕರೊನಾದಿಂದ 89 ಜನರು ಗುಣ ಹೊಂದಿದ್ದು, 32 ಜನರಿಗೆ ಸೋಂಕು ತಗುಲಿದೆ. ಒಟ್ಟಾರೆ ಸೋಂಕು ತಗುಲಿ ಗುಣ ಹೊಂದಿದವರ ಸಂಖ್ಯೆ ಸಾವಿರ ದಾಟಿದೆ. ಹಳಿಯಾಳ,ದಾಂಡೇಲಿ ಸೇರಿ 21, ಭಟ್ಕಳದ 6, ಶಿರಸಿ ಹೊನ್ನಾವರದ ತಲಾ ಇಬ್ಬರಿಗೆ, ಜೊಯಿಡಾದ ಒಬ್ಬ ವ್ಯಕ್ತಿಗೆ ಕೋವಿಡ್ ಇರುವುದು ಖಚಿತವಾಗಿದೆ. ಕಾರವಾರದ 3, ಅಂಕೋಲಾ ಹಾಗೂ ಕುಮಟಾದ ತಲಾ 23, ಹೊನ್ನಾವರದ 2, ಶಿರಸಿಯ 9, ಯಲ್ಲಾಪುರದ 11, ಮುಂಡಗೋಡಿನ 4, ಹಳಿಯಾಳದ 14 ಜನರು ಕರೊನಾ ಮುಕ್ತರಾಗಿ ಕೇರ್ ಸೆಂಟರ್ನಿಂದ ಬಿಡುಗಡೆ ಹೊಂದಿದ್ದಾರೆ.
ಒಟ್ಟಾರೆ ಸೋಂಕಿತರಲ್ಲಿ ಇಬ್ಬರು ಮಕ್ಕಳು, ಮೂವರು ವೃದ್ಧರಿದ್ದಾರೆ. ಐವರಿಗೆ ಜ್ವರದ ಲಕ್ಷಣ (ಐಎಲ್ಐ) ಕಾಣಿಸಿಕೊಂಡಿದೆ. 21 ಜನರಿಗೆ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಕರೊನಾ ಖಚಿತವಾಗಿದೆ.ಹೊರ ಊರಿನಿಂದ ಬಂದ ಒಬ್ಬನಿಗೆ ರೋಗ ಖಚಿತವಾಗಿದೆ. ಮೂವರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಹಳಿಯಾಳ ಸರ್ಕಾರಿ ಆಸ್ಪತ್ರೆಯ ಇಬ್ಬರು ನರ್ಸ್ಗಳು, ಕೊಟ್ಟಾನ್ ಲೇಔಟ್ನ ಮಹಿಳೆ, ತೇರಗಾಂವ ಗ್ರಾಮದ 68 ವರ್ಷದ ವೃದ್ಧೆ, 14 ವರ್ಷದ ಬಾಲಕ ಸೇರಿ ಮೂವರಿಗೆ ಸೋಂಕು ಇರುವುದು ದೃಢಪಟ್ಟಿದೆ. ದಾಂಡೇಲಿಯಲ್ಲಿ ವಿನಾಯಕ ನಗರ ಹಾಗೂ ಟೌನ್ಶಿಪ್ನಲ್ಲಿ ತಲಾ 4, ಹಳೆ ದಾಂಡೇಲಿಯಲ್ಲಿ 5, ಎಚ್ ಮಾದರಿಯ ಮನೆಗಳಲ್ಲಿ 3, ಮಾರುತಿನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.
ಗಲಾಟೆ ನಡೆಸಿದವರ ವಿರುದ್ಧ ಪ್ರಕರಣ
ಆಸ್ಪತ್ರೆಗೆ ಹೋಗಲು ವಿರೋಧ ವ್ಯಕ್ತಪಡಿಸಿ ಗಲಾಟೆ ನಡೆಸಿದ ನಗರದ ಹೆಸ್ಕಾಂ ಕಚೇರಿಯ ಎದುರಿನ 60 ರಿಂದ 70 ಜನರ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ಐ ಶ್ರೀಧರ ನಾಯ್ಕ ದೂರು ದಾಖಲಿಸಿದ್ದು, ದೊಂಬಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭಾನುವಾರ ಹೆಸ್ಕಾಂ ಕಚೇರಿಯ ಎದುರಿನ ಇಬ್ಬರು ಮಕ್ಕಳು ಸೇರಿ ಐವರಿಗೆ ಕರೊನಾ ಸೋಂಕು ಖಚಿತವಾಗಿತ್ತು. ಆದರೆ, ಅವರನ್ನು ಕರೊನಾ ಕೇರ್ ಸೆಂಟರ್ಗೆ ಸೇರಿಸಲು ಸಾರ್ವಜನಿಕರು ವಿರೋಧಿಸಿ ಪ್ರತಿಭಟಿಸಿದ್ದರು. ಇದರಿಂದ ಆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿತ್ತು.