ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2025ರ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಸೆಂಬರ್ ತಿಂಗಳಲ್ಲಿ ವಾತಾವರಣ ಮತ್ತು ಹವಾಮಾನವು ಚೆನ್ನಾಗಿರುವುದರಿಂದ ಆಯೋಜನೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಸಮ್ಮೇಳನಗಳಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ, ಭಾಷೆ ಬೆಳವಣಿಗೆ, ಗಡಿ ಭಾಗದ ಶಾಲಾ ವಿಚಾರಗಳ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರದ ಮುಂದಿಡಲಾಗುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ಆಶಯದಂತೆ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು, ಶಾಲಾ-ಕಾಲೇಜು, ವಸತಿ ನಿಲಯಗಳ ಮಕ್ಕಳು ಸೇರಿದಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಕನ್ನಡದ ನಾಡು-ನುಡಿ, ಭಾಷಾಭಿಮಾನ, ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಕನ್ನಡದ ತೇರನ್ನು ಎಳೆಯಲು ನಾವೆಲ್ಲರೂ ಸಿದ್ಧರಾಗೋಣ ಎಂದರು.
ಅಖಂಡ ಜಿಲ್ಲೆಯಲ್ಲಿ ಈಗಾಗಲೇ ಐದು ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈ ಹಿಂದೆ 1920 ರಲ್ಲಿ ಮೊದಲ ಬಾರಿಗೆ ಅಖಂಡ ಜಿಲ್ಲೆಯ ಹೊಸಪೇಟೆಯಲ್ಲಿ ರೊದ್ದ ಶ್ರೀನಿವಾಸರಾವ್ ಅವರ ಅಧ್ಯಕ್ಷತೆಯಲ್ಲಿ 6ನೇ ಸಮ್ಮೇಳನ ನಡೆಯಿತು. ಎರಡನೇ ಬಾರಿಗೆ ಬಾರಿಗೆ 1926 ರ ಮೇ 22 ರಿಂದ 24 ರ ವರೆಗೆ ಮೂರು ದಿನಗಳ ಕಾಲ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ನಗರದಲ್ಲಿ ನಡೆದಿತ್ತು. ಇದರ ಅಧ್ಯಕ್ಷತೆಯನ್ನು ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಡಿ (ಫ.ಗು.ಹಳಕಟ್ಟಿ) ಅವರು ವಹಿಸಿದ್ದರು.
ನಂತರದ 12 ವರ್ಷಗಳ ನಂತರ ಮೂರನೇ ಬಾರಿಗೆ 1938 ರ ಡಿ.29 ರಿಂದ 31 ರ ವರೆಗೆ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ರಂಗನಾಥ ದಿವಾಕರ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ನಾಲ್ಕನೇ ಬಾರಿಗೆ ಹರಪನಹಳ್ಳಿಯಲ್ಲಿ 1947 ರಲ್ಲಿ ಸಿ.ಕೆ.ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ 11 ವರ್ಷಗಳ ನಂತರ 1958 ರ ಜ.18 ರಿಂದ 20 ರ ವರೆಗೆ ವಿನಾಯಕ್ ಕೃಷ್ಣ ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ 5ನೇ ಬಾರಿಗೆ ನಡೆಯಿತು ಎಂದು ಮಾಹಿತಿ ನೀಡಿದರು.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸರ್ ಥಾಮಸ್ ಮುನ್ರೋ ಅವರ ಕುಟುಂಬಸ್ಥರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗುವುದು ಎಂದು ಹೇಳಿದರು.
ಡಿಸಿ ಪ್ರಶಾಂತ ಕುಮಾರ ಮಿಶ್ರಾ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಇದ್ದರು.