88 ಕೆರೆ ನೀರು ತುಂಬಿಸುವ ಯೋಜನೆಗೆ ಬಿಎಸ್​ವೈ ಚಾಲನೆ

7-hvr-03
Published on

ಹಾವೇರಿ: ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಸರ್ವಜ್ಞ ಏತ ನೀರಾವರಿ ಯೋಜನೆಗೆ 185 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದು, ಇದರಿಂದ 43 ಗ್ರಾಮಗಳ 88 ಕೆರೆಗಳಿಗೆ ನೀರು ತುಂಬಿಸಲಾಗುವುದು. ಕೆರೆ ತುಂಬಿಸಿದರೆ ಅಂತರ್ಜಲ ವೃದ್ಧಿಯಾಗಿ ರೈತನ ಜೀವನ ನೆಮ್ಮದಿಯಾಗಲಿದೆ. ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ದೂದಿಹಳ್ಳಿ ಮುರಾರ್ಜಿ ದೇಸಾಯಿ ನೂತನ ಕಟ್ಟಡದ ಲೋಕಾರ್ಪಣೆ ಸೇರಿ 330.94 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಶನಿವಾರ ಹಿರೇಕೆರೂರು ತಾಲೂಕು ದೂದಿಹಳ್ಳಿ ಮುರಾರ್ಜಿ ದೇಸಾಯಿ ವಸತಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸಕ್ತ ಬಜೆಟ್​ನಲ್ಲಿ ಜಿಲ್ಲೆಗೆ 20 ಹಾಸಿಗೆಯ ಆಯುಷ್ ಆಸ್ಪತ್ರೆ, ಶಿಶುವಿನಹಾಳ ಶರೀಫರ ಕರ್ಮಭೂಮಿ ಅಭಿವೃದ್ಧಿ, ಸರ್ವಜ್ಞ ಪ್ರಾಧಿಕಾರದ ಅಭಿವೃದ್ಧಿ, ಜವಳಿಪಾರ್ಕ್​ಗೆ ಆದ್ಯತೆ ಕೊಟ್ಟಿದ್ದೇವೆ. ಕುಮದ್ವತಿ ನದಿಗೆ ಅಡ್ಡಲಾಗಿ ಹಿರೇಮೊರಬ ಬಳಿ 17 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ಸಹಿತ ಸೇತುವೆ ಮತ್ತು ಹಿರೇಮಾದಾಪುರ ಗ್ರಾಮದ ಬಳಿ ಬ್ಯಾರೇಜ್ ನಿರ್ವಣಕ್ಕೆ ಚಾಲನೆ ಕೊಟ್ಟಿದ್ದೇವೆ. ಎಲ್ಲ ವರ್ಗದ ಜನತೆಗೆ ಸರ್ಕಾರದ ಸೌಲಭ್ಯ ಕೊಡಲಾಗುವುದು ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಇಂದು ಉದ್ಘಾಟನೆಗೊಂಡಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ಬಿ.ಸಿ. ಪಾಟೀಲರ ಬೇಡಿಕೆಯಂತೆ ಪಿಯು ಕಾಲೇಜ್​ನ್ನು ಆರಂಭಿಸಲಾಗುವುದು. ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಿಗೆ ತಲಾ ಒಂದರಂತೆ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ದೇಶದಲ್ಲಿ ರಾಜ್ಯದ ವಸತಿ ಶಾಲೆಗಳ ಮಕ್ಕಳ ಶಿಕ್ಷಣದಲ್ಲಿ ರಾಜ್ಯವು ನಂ. 1 ಸ್ಥಾನದಲ್ಲಿದೆ. ರಾಜ್ಯದಲ್ಲಿ 826 ವಸತಿ ಶಾಲೆಗಳಲ್ಲಿ 426 ಶಾಲೆಗಳಿಗೆ ಸ್ವಂತ ಕಟ್ಟಡವಿದೆ. 190 ವಸತಿ ಶಾಲೆಗಳ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. 43 ಲಕ್ಷ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2,309 ವಸತಿ ನಿಲಯ ಮತ್ತು 826 ವಸತಿ ಶಾಲೆಗಳಲ್ಲಿ 4 ಲಕ್ಷ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಂತಹ ಅದ್ಭುತ ಕೆಲಸವನ್ನು ಸಿಎಂ ಯಡಿಯೂರಪ್ಪ ಅವರು ಮಾಡುತ್ತಿದ್ದಾರೆ ಎಂದರು.

ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ 6ತಿಂಗಳಲ್ಲಿ ತಾಲೂಕಿನಲ್ಲಿ 286 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಾಗಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಕ್ಕಳಿಗಾಗಿ ಬಜೆಟ್ ಮಂಡಿಸಿದ್ದಾರೆ. 279 ಯೋಜನೆಗಳ ಮೂಲಕ ಮಕ್ಕಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದು ಶ್ಲಾಘನೀಯ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಹಿರೇಕೆರೂರು ತಾಪಂ ಅಧ್ಯಕ್ಷ ರಾಜು ಬಣಕಾರ, ಚನ್ನಳ್ಳಿ ಗ್ರಾಪಂ ಅಧ್ಯಕ್ಷೆ ಸಿದ್ದವ್ವ ವಡ್ಡರ, ಎಪಿಎಂಸಿ ಅಧ್ಯಕ್ಷ ಸಿದ್ದಪ್ಪ ಕರೇಗೌಡ್ರ, ಜಿಪಂ, ತಾಪಂ, ಪಪಂ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜ್​ಗಳ ವಿದ್ಯಾರ್ಥಿಗಳು, ಸಾರ್ವಜನಿಕರಿದ್ದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸ್ವಾಗತಿಸಿದರು. ಪ್ರಾಚಾರ್ಯ ಪ್ರೊ. ಎಸ್.ಪಿ. ಗೌಡರ, ಡಿ.ಸಿ. ಪಾಟೀಲ, ಮಹೇಂದ್ರ ಬಡಳ್ಳಿ ನಿರೂಪಿಸಿದರು. ಜಿಪಂ ಸಿಇಒ ರಮೇಶ ದೇಸಾಯಿ ವಂದಿಸಿದರು.

ಬಿಸಿಪಿಗೆ ಜಿಲ್ಲಾ ಉಸ್ತುವಾರಿ...?: ಮುಂದಿನ ದಿನಗಳಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲರ ನೇತೃತ್ವದಲ್ಲಿ ಈ ಜಿಲ್ಲೆ, ತಾಲೂಕು ಅಭಿವೃದ್ಧಿ ಆಗುತ್ತದೆ. ಮಾಜಿ ಶಾಸಕ ಯು.ಬಿ. ಬಣಕಾರ ಸೇರಿ ಜಿಲ್ಲೆಯ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಪರೋಕ್ಷವಾಗಿ ಮುಂದಿನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬಿ.ಸಿ. ಪಾಟೀಲರಿಗೆ ನೀಡು ಕುರಿತು ಸಿಎಂ ಸುಳಿವು ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net