

ಕೆಜಿಎಫ್: ತಾಲೂಕಿನಲ್ಲಿ ಜಾತಿ ಗಣತಿ ಸಮೀಕ್ಷೆಯು ವೇಗ ಪಡೆದುಕೊಂಡಿದ್ದು, ಈಗಾಗಲೇ ಶೇ.12ರಷ್ಟು ಸಮೀಕ್ಷೆಯು ಪೂರ್ಣಗೊಂಡಿದೆ. ಸಮೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಡಾ.ಮೈತ್ರಿ ತಿಳಿಸಿದರು.
ನಗರದ ಆಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲು ಕೆಲವು ತಾಂತ್ರಿಕ ದೋಷ ಕಂಡುಬಂದಿದ್ದು, ಈಗ ಯಾವುದೇ ಸಮಸ್ಯೆಯಿಲ್ಲದೇ ಸುಸೂತ್ರವಾಗಿ ಸಮೀಕ್ಷೆ ನಡೆಯುತ್ತಿದ್ದು, ಸರ್ಕಾರ ನಿಗದಿಗೊಳಿಸಿರುವ ಅವಧಿಯೊಳಗೆ ಶೇ 100 ಕಾರ್ಯ ಪೂರ್ಣಗೊಳಿಸುವ ವಿಶ್ವಾಸವಿರುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಗಣಿತಿಗೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಒ ಅನಿತಾ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಹಿನ್ನಲೆಯಲ್ಲಿ ಗರಂ ಆದ ಉಪ ವಿಭಾಗಾಧಿಕಾರಿ ಬಿಇಒ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಸೂಪರ್ವೈಸರ್ಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಂಜೆ 4 ಗಂಟೆಯಾದರೂ ಕುಡಿಯುವ ನೀರು, ಊಟ ಸಹ ನೀಡದೆ ಇದ್ದುದಕ್ಕೆ ಬಿಸಿಎಂ ಅಧಿಕಾರಿಗೆ ಸಮೀಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಸರ್ಕಾರದ ವತಿಯಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಸಂಜೆ 4 ಗಂಟೆಯಾದರೂ ಇನ್ನೂ ಊಟದ ವ್ಯವಸ್ಥೆ ಏಕೆ ಮಾಡಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು.
ಗಣತಿದಾರರಿಗೆ ನೀರು ಸಹ ಕೊಟ್ಟಿಲ್ಲ!
ತಾಲೂಕು ಕಚೇರಿಯಲ್ಲಿರುವ ಶೌಚಗೃಹ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದ್ದು, ಶೌಚಗೃಹಕ್ಕೆ ಹೋದರೆ ಕನಿಷ್ಠ ನೀರಿನ ವ್ಯವಸ್ಥೆಯನ್ನೂ ಕಲ್ಪಸದೇ ಇದ್ದುದರಿಂದ ಸಮೀಾ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಶೌಚಗೃಹಕ್ಕೆ ಹೋಗಲು ಪರದಾಡಿದರು. ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ಮಹಿಳಾ ಸಿಬ್ಬಂದಿಯೊಬ್ಬರು ಬೆಳಗ್ಗೆಯಿಂದ ಊಟ, ತಿಂಡಿ, ನೀರು ಕೊಟ್ಟಿಲ್ಲ, ಈಗ ಶೌಚಗೃಹಕ್ಕೆ ಬೀಗ ಜಡಿದಿದ್ದು, ತಿಂಡಿ, ನೀರು ಇಲ್ಲದೆ ಇಂತಹ ಕೆಲಸ ಯಾಕೆ ಬೇಕು? ಎಂದು ಸಿಬ್ಬಂದಿ ಪಿಸುಗುಡುತ್ತಿದ್ದರು.