

ಬೆಳಗಾವಿ: ಕುಂದಾನಗರಿ, ಎರಡನೇ ರಾಜಧಾನಿ ಖ್ಯಾತಿಯ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಕರೊನಾ ನಂಜು ಹಬ್ಬುತ್ತಿದ್ದು, ವೈರಸ್ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾಡಳಿತ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಿಸಿದೆ. ಆದರೆ, ಕಂಟೇನ್ಮೆಂಟ್ ಪ್ರದೇಶಗಳು ಕರೊನಾ ಸೋಂಕಿತರ ಸಂಖ್ಯೆಗಿಂತ ಹೆಚ್ಚಿರುವುದು ವಿಶೇಷ.
ಸದ್ಯ ಜಿಲ್ಲೆಯಲ್ಲಿ ಕೇವಲ 85 ಸಕ್ರಿಯ ಸೋಂಕಿತರು ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾ ಸೋಂಕಿತರು ಗುಣಮುಖರಾಗಿದ್ದರಿಂದ ಜಿಲ್ಲೆಯ 10 ಕಂಟೇನ್ಮೆಂಟ್ ಪ್ರದೇಶಗಳನ್ನು ಕಂಟೇನ್ಮೆಂಟ್ ಮುಕ್ತ ಪ್ರದೇಶ ಎಂದು ಜಿಲ್ಲಾ ಡಳಿತ ಘೋಷಿಸಿದೆ. ಈ ಪ್ರದೇಶಗಳಲ್ಲಿ ಎಂದಿನಂತೆ ಜನಜೀವನ ಆರಂಭವಾಗಿದೆ. ಈ ಪ್ರದೇಶ ಹೊರತುಪಡಿಸಿ ಜಿಲ್ಲಾದ್ಯಂತ 88 ಕಂಟೇನ್ಮೆಂಟ್ ಪ್ರದೇಶಗಳಿವೆ.
ಸೋಂಕಿತರಿರುವ ಪ್ರದೇಶ ಸೀಲ್: ಕ್ವಾರಂಟೈನ್ ನಿಯಮಾನುಸಾರ ಸೋಂಕು ಪರೀಕ್ಷೆ ವರದಿ ಬಂದ ನಂತರವೇ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ವರದಿ ಬರುವ ಮುನ್ನವೇ ಶಂಕಿತರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಆದರೆ, ವರದಿ ಬಂದ ಮೇಲೆ ಕ್ವಾರಂಟೈನ್ ಆದವರನ್ನು ಆಸ್ಪತ್ರೆಗೆ ಕರೆದೆಕೊಂಡು ಹೋಗುವುದು, ಸೋಂಕಿತರು ಇರುವ ಪ್ರದೇಶವನ್ನು ಕಂಟೇನ್ಮೆಂಟ್ ಮಾಡುವ ಪ್ರಕ್ರಿಯೆಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿದ್ದಾರೆ.
ಸೋಂಕು ದುಪ್ಪಟ್ಟಾಗುವ ಸಾಧ್ಯತೆ: ಜೂನ್ ತಿಂಗಳಲ್ಲಿ ಬೆಳಗಾವಿಗೆ ಮತ್ತೊಮ್ಮೆ ಹೊರ ರಾಜ್ಯದವರು ಬರಲು ಅವಕಾಶ ನೀಡಿದರೆ ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಬಹುದು. ಜತೆಗೆ, ಜನರು ಬಸ್‌ನಿಲ್ದಾಣ ಹಾಗೂ ಮಾರುಕಟ್ಟೆಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳದೆ ಮನಬಂದಂತೆ ಓಡಾಡುತ್ತಿರುವುದರಿಂದ ಹೊಸ ಪ್ರದೇಶಗಳಿಗೂ ಮಹಾಮಾರಿ ಕರೊನಾ ಸೋಂಕು ವ್ಯಾಪಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜುಲೈ ವೇಳೆಗೆ ಕರೊನಾ ಸೋಂಕಿತರು ಹಾಗೂ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ ದುಪ್ಪಟ್ಟುಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಕೋವಿಡ್-19 ಹರಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸೋಂಕಿತರು ಗುಣಮುಖರಾದ ಬಳಿಕ ಆಯಾ ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಮುಕ್ತ ಪ್ರದೇಶ ಎಂದು ಘೋಷಿಸಲಾಗುತ್ತಿದೆ. ಹೀಗಾಗಿ ಜೂ. 2ರಂದು ಕೇವಲ 9 ಪ್ರದೇಶಗಳನ್ನು ಕಂಟೇನ್ಮೆಂಟ್ ಮುಕ್ತಗೊಳಿಸಲಾಗಿತ್ತು. ಆದರೆ, ಇದೀಗ ಈ ಸಂಖ್ಯೆ 10ಕ್ಕೆ ಹೆಚ್ಚಿದೆ. ಜತೆಗೆ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಒಟ್ಟಾರೆ 40 ಹೊಸ ಪ್ರದೇಶಗಳಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ 48 ಕ್ಕೆ ಇದ್ದ ಕಂಟೇನ್ಮೆಂಟ್ ಜೋನ್‌ಗಳನ್ನು
ಜೂ.12ರಂದು 88ಕ್ಕೆ ಹೆಚ್ಚಳ ಮಾಡಲಾಗಿದೆ.
ಕರೊನಾ ಸೋಂಕು ಪತ್ತೆ ಯಾದ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುವುದರ ಜತೆಗೆ ಸೋಂಕು ಹರಡದಂತೆ ತಡೆಗಟ್ಟಲು ಸೋಂಕು ದೃಢಪಟ್ಟ ದಿನವೇ ಆ ಪ್ರದೇಶವನ್ನು ಕಂಟೇನ್ಮೆಂಟ್ ಎಂದು ಘೋಷಿಸಲಾ ಗುತ್ತಿದೆ. ಎಲ್ಲ 88 ಪ್ರದೇಶಗಳಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.| ಡಾ.ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ, ಬೆಳಗಾವಿ
| ರವಿ ಗೋಸಾವಿ ಬೆಳಗಾವಿ