87ನೇ ಸಾಹಿತ್ಯ ಸಮ್ಮೇಳನಕ್ಕೆ 87 ಪುಸ್ತಕಗಳು ಬಿಡುಗಡೆ

Sahithya sammelana
Published on

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಪುಸ್ತಕಗಳು ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಪರಿಷತ್ತಿನ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆಯೂ ಒಂದಾಗಿದ್ದು, ಈವರೆಗೆ 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಸಮ್ಮೇಳನದಲ್ಲಿ ಪ್ರಕಟವಾಗುವ ಪುಸ್ತಕಗಳಿಗೆ ವಿಶೇಷ ಮನ್ನಣೆಯಿದ್ದು, ಸಮ್ಮೇಳನ ಸಂಖ್ಯೆಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಪರಿಷತ್ತಿನ ಪ್ರಕಟಣಾ ಸಮಿತಿಯ ಜತೆಗೆ, 87ನೇ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಎಚ್.ಎಸ್.ಮುದ್ದೇಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರಕಟಣಾ ಸಮಿತಿಯನ್ನು ರಚಿಸಲಾಗಿತ್ತು. ಎರಡೂ ಸಮಿತಿಗಳು ಸೇರಿ 87 ಪುಸ್ತಕಗಳನ್ನು ಹೊರತರುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ವಿಶೇಷ ಮತ್ತು ಸಾಧಕರಿಗೆ ಸಂಬಂಧಿಸಿದ ಪುಸ್ತಕಗಳಿಗೂ ಆದ್ಯತೆ ನೀಡಲಾಗಿದೆ. ಕನ್ನಡ ಸಾಹಿತ್ಯದ ಮಹತ್ವದ ಕೃತಿಗಳಲ್ಲೊಂದಾದ ತೊರವೆ ನರಹರಿಯ ತೊರವೆ ರಾಮಾಯಣದ ಎರಡು ಸಂಪುಟಗಳು ಬಿಡುಗಡೆಯಾಗಲಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾ ಇಸ್ಮಾಯಿಲ್ ಅವರ ಜೀವನ ಹಾಗೂ ಸಾಧನೆಯನ್ನು ವಿವರಿಸುವ ಕೃತಿಗಳು ಪ್ರಕಟವಾಗುತ್ತಿವೆ ಎಂದರು.

ಕನ್ನಡ ಸಾಹಿತ್ಯ ಚರಿತ್ರೆಗೆ ಬಹು ಉಪಯುಕ್ತ ಮೂರು ಕೃತಿಗಳು ಹಾಗೂ ತ.ಸು.ಶಾಮರಾಯರ ಕನ್ನಡ ಸಾಹಿತ್ಯ ಚರಿತ್ರೆ ಉತ್ತರ ಕರ್ನಾಟಕದ ಭಾಗದ ಬರಹಗಾರರ ಚರಿತ್ರೆ ಹೇಳುವ ರಾ.ಯ.ಧಾರವಾಡಕರ ಅವರ ಹೊಸಗನ್ನಡ ಸಾಹಿತ್ಯದ ಉದಯಕಾಲ ಮತ್ತು ಅನುವಾದ ಸಾಹಿತ್ಯದ ಚರಿತ್ರೆ ಹೇಳುವ ಪ್ರೊ.ಮೋಹನ್ ಕುಂಟಾರ್ ಅವರ ಕೃತಿಗಳು ಈ ಮಾಲಿಕೆಯಲ್ಲಿ ಪ್ರಕಟವಾಗಲಿವೆ ಎಂದು ಹೇಳಿದರು.

ಮಂಡ್ಯದ ಏಳು ತಾಲ್ಲೂಕುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ತಾಲ್ಲೂಕು ದರ್ಶನಗಳು, ಮಂಡ್ಯ ಜಿಲ್ಲೆಯ ಪ್ರಮುಖ ಸಾಧಕರ ಪರಿಚಯಗಳ ಸಂಗ್ರಹಯೋಗ್ಯ ಕೃತಿಗಳು ಬಿಡುಗಡೆಯಾಗಲಿವೆ. ಮಂಡ್ಯ ಜಿಲ್ಲೆಯ ಶಾಸನಗಳು, ಜಲಮೂಲಗಳು, ಜನಪದ ಮಹಾಮಹಿಮರು, ಭಾಷೆಯ ವೈಶಿಷ್ಟ್ಯ, ಜಾತ್ರೆಗಳು ಸೇರಿ ಅನೇಕ ಮಗ್ಗಲುಗಳನ್ನು ಪರಿಚಯ ಮಾಡಿ ಕೊಡುವ ಅಧ್ಯಯನ ಪೂರ್ಣ ಕೃತಿಗಳು ಈ ಸಂದರ್ಭದಲ್ಲಿ ಪ್ರಕಟವಾಗಲಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net