

ಬಸವಕಲ್ಯಾಣ: ಧರ್ಮಕ್ಕಿಂತ ರಾಷ್ಟ್ರಧರ್ಮ ದೊಡ್ಡದು. ಮತ, ಸಂಪ್ರದಾಯ, ಆಚರಣೆ ಮನೆಗೆ ಸೀಮಿತವಾಗಿರಬೇಕು. ಮನೆಯಿಂದ ಹೊರಬಂದರೆ ಒಂದೇ ಧರ್ಮ. ಅದುವೇ ರಾಷ್ಟ್ರಧರ್ಮ. ನಾವೆಲ್ಲರೂ ಒಂದು ಎಂಬ ಭಾವ ಎಲ್ಲರಲ್ಲಿ ಬೆಳೆಯಬೇಕು ಎಂದು ಸೊಲ್ಲಾಪುರದ ಪಂಡಿತ ರಾಜವೀರಜಿ ಶಾಸ್ತ್ರೀ ಹೇಳಿದರು.
ನಗರದ ಆರ್ಯ ಸಮಾಜ ಮಂದಿರ ಪರಿಸರದಲ್ಲಿ ಶುಕ್ರವಾರ ಆಯೋಜಿಸಿದ್ದ ಹುತಾತ್ಮ ಧರ್ಮಪ್ರಕಾಶಜಿ ಅವರ ೮೬ನೇ ಸ್ಮೃತಿ ಹಾಗೂ ದೇಶ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಧರ್ಮಪ್ರಕಾಶಜಿ ಅವರ ದೇಶ ಭಕ್ತಿ, ತ್ಯಾಗ-ಬಲಿದಾನ ಸ್ಮರಿಸಬೇಕು. ದೇಶದ ಭವ್ಯ ಸಂಸ್ಕೃತಿ, ಸ್ವಾತಂತ್ರ್ಯಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಅವಶ್ಯಕ ಎಂದು ಪ್ರತಿಪಾದಿಸಿದರು.
ಹೈದರಾಬಾದ್‌ನ ಪಂಡಿತ ನರೇಂದ್ರಜಿ ಆಚಾರ್ಯ ವಿಶೇಷ ಉಪನ್ಯಾಸ ನೀಡಿ, ಜೀವನದಲ್ಲಿ ದುಃಖ, ಸಮಸ್ಯೆಗಳ ಜತೆ ಸಮಾಧಾನವೂ ಇದೆ. ಇದರ ಮಾರ್ಗ ಅರಿಯಬೇಕು. ರಾಷ್ಟçಕ್ಕಾಗಿ ಪ್ರತಿಯೊಬ್ಬರು ತಮ್ಮ ಕೊಡುಗೆ ನೀಡುವುದನ್ನು ಮರೆಯಬಾರದು. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ದೇಶ ಭಕ್ತರ, ವೀರರ ಚರಿತ್ರೆ ತಿಳಿಸಿಕೊಡುವ ಮೂಲಕ ಸ್ಫೂರ್ತಿ ತುಂಬಬೇಕು. ಜ್ಞಾನ ವೃದ್ಧಿಯಾಗಿ ಆರ್ಯ ಸಮಾಜಕ್ಕೆ ಬರಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಹೈದರಾಬಾದ್ (ಕಲ್ಯಾಣ) ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಆರ್ಯ ಸಮಾಜದ ಪಾತ್ರ ಮಹತ್ವದ್ದಾಗಿತ್ತು. ಇಂದು ಕಲುಷಿತಗೊಳ್ಳುತ್ತಿರುವ ವಾತಾವರಣದಲ್ಲಿ ಪರಿವರ್ತನೆ ತರಬೇಕಾದರೆ ಯುವಕರಲ್ಲಿ ಸಂಸ್ಕಾರ ಮತ್ತು ರಾಷ್ಟ್ರಭಕ್ತಿ ಜಾಗೃತಗೊಳಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ಪ್ರಧಾನ ಶ್ರೀ ಋಷಿಮಿತ್ರ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಆರ್ಯ ಸಮಾಜದಿಂದ ಗುರುಕುಲ ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.
ಆರ್ಯ ಪ್ರತಿನಿಧಿ ಸಭಾ ನಿಕಟಪೂರ್ವ ಅಧ್ಯಕ್ಷ ಸುಭಾಷ ಅಷ್ಟಿಕರ್ ಮಾತನಾಡಿ, ವ್ಯಕ್ತಿ ನಿರ್ಮಾಣದ ಕಾರ್ಯ ನಡೆಯಬೇಕಿದೆ. ಆರ್ಯ ಸಮಾಜದ ಆಶಯವೂ ಇದೇ ಆಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು.
ಉಮರ್ಗಾದ ಶ್ರೀ ವಿಜ್ಞಾನ ಮುನಿ ಸಮ್ಮುಖ ವಹಿಸಿದ್ದರು. ಪ್ರಮುಖರಾದ ಬಸವರಾಜ ಆರ್ಯ, ನಾರಾಯಣರಾವ ಚಿದ್ರಿ, ಮಲ್ಲಯ್ಯ ಸ್ವಾಮಿ ಹಿರೇಮಠ, ವಿಠ್ಠಲರಾವ ಸೂರ್ಯವಂಶಿ, ಸತೀಶರಾವ ಲಾಡ, ಮಾಣಿಕರಾವ ಲಾಡ, ನಾರಾಯಣರಾವ ಬುನ್ನಾ, ಭಾನುಪ್ರಸಾದ ಪಾಂಡೆ ಇತರರಿದ್ದರು.
ಬಸವಕಲ್ಯಾಣ ಆರ್ಯ ಸಮಾಜದ ಪ್ರಧಾನ ಶಿವಾಜಿರಾವ ಜಗತಾಪ ಪ್ರಾಸ್ತಾವಿಕ ಮಾತನಾಡಿದರು. ಪುರೋಹಿತ ಸುರೇಂದ್ರಗೀರ ಗೋಸ್ವಾಮಿ ಸ್ವಾಗತಿಸಿದರು. ಮಂತ್ರಿ ಸಂಜುಕುಮಾರ ಜಾಧವ್ ನಿರೂಪಣೆ ಮಾಡಿದರು. ಉದಗೀರ್‌ನ ಪ್ರತಾಪಸಿಂಹಜಿ ಚವ್ಹಾಣ್ ಭಜನೆ ನಡೆಸಿಕೊಟ್ಟರು.
ಬೆಳಗ್ಗೆ ಈಶ್ವರ ನಗರದ ಧರ್ಮ ಪ್ರಕಾಶ ಪ್ರಾಥಮಿಕ ಶಾಲೆಯಲ್ಲಿ ಅಗ್ನಿಹೋತ್ರ (ಯಜ್ಞ), ನಂತರ ಧರ್ಮಪ್ರಕಾಶ ಗಲ್ಲಿಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಆರ್ಯ ಸಮಾಜ ಮಂದಿರವರೆಗೆ ಭಜನೆ, ಜೈಘೊಷಗಳೊಂದಿಗೆ ನಗರ ಕೀರ್ತನೆ ಜರುಗಿತು.
ಕಲ್ಯಾಣ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಆರ್ಯ ಸಮಾಜದ ಕೊಡುಗೆ ದೊಡ್ಡದು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ದೇಶಭಕ್ತರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು. ವೈಚಾರಿಕತೆ ನೆಪದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಮರೆಯಬಾರದು. ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಜತೆಗೆ ದೇಶಭಕ್ತಿ ಭಾವ ಜಾಗೃತಗೊಳಿಸುವ ಅಗತ್ಯವಿದೆ.
| ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ
ದೇಶದ ಪ್ರತಿಯೊಬ್ಬ ನಾಗರಿಕ ಸ್ವಾರ್ಥ ಮತ್ತು ಭ್ರಷ್ಟಾಚಾರಮುಕ್ತರಾಗಿ ನಿಸ್ವಾರ್ಥ ಮತ್ತು ಪ್ರಾಮಾಣಿಕತೆ ಬೆಳೆಸಿಕೊಂಡಾಗ ಮಾತ್ರ ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣ ಸಾಧ್ಯವಿದೆ. ಇದಕ್ಕಾಗಿ ಯುವಕರಲ್ಲಿ ಒಳ್ಳೆಯ ಸಂಸ್ಕಾರ ಮತ್ತು ದೇಶಭಕ್ತಿ ಭಾವ ತುಂಬುವ ಕೆಲಸ ನಡೆಯಬೇಕು.
| ಪಂಡಿತ ರಾಜವೀರಜಿ ಶಾಸ್ತ್ರೀ ಸೊಲ್ಲಾಪುರ