8,682 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆ ನಷ್ಟ

Irrigation Use Training Workshop
Irrigation Use Training Workshop sulibele
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಹೊಸಕೋಟೆ ತಾಲೂಕಿನಲ್ಲಿ 9,300 ಹೆಕ್ಟರ್‌ನಲ್ಲಿ ಬಿತ್ತನೆ ಮಾಡಿದ್ದ ರಾಗಿ ಬೆಳೆ 8,682 ಹೆಕ್ಟರ್ ಪ್ರದೇಶದಲ್ಲಿ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಕೇಂದ್ರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣುಕಾ ಪ್ರಸನ್ನ ಹೇಳಿದರು.
ಹೋಬಳಿ ಅತ್ತಿಬೆಲೆಯಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಕೃಷಿಯಲ್ಲಿ ನೀರಾವರಿ ಬಳಕೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಭೂಮಿಯಲ್ಲಿ ಶೇ.70 ನೀರಿದೆ. ಆದರೆ ಬಳಕೆ ಮಾಡುತ್ತಿರುವುದು ಕೇವಲ ಶೇ. 1 ಮಾತ್ರ. ಹವಾಮಾನ ವೈಪರೀತ್ಯದಿಂದ ಅಂರ್ತಜಲಮಟ್ಟ ದಿನೇ ದಿನೆ ಕುಸಿಯುತ್ತಿದ್ದು, ಭವಿಷ್ಯದ ದಿನಗಳು ಭೀಕರವಾಗಿರಲಿವೆ ಎಂದರು.
ಮಳೆ ಆಧಾರಿತ ಕೃಷಿಕರು ಜಮೀನಿನಲ್ಲಿ ಇಂಗುಗುಂಡಿ ನಿರ್ಮಾಣ ಮಾಡಿ, ಅಂರ್ತಜಲ ಹೆಚ್ಚಿಸಲು ಮುಂದಾಗಬೇಕು. ಖುಷ್ಕಿ ರೈತರು ವಿಶೇಷ ಗುರುತಿನ ಚೀಟಿಗೆ ನೊಂದಾಯಿಸಿಕೊಂಡು ಕೃಷಿ ಸಮ್ಮಾನ ಯೋಜನೆ ಸೌಲಭ್ಯ ಪಡೆಯಬಹುದು.ಆದರೆ ಇದಕ್ಕೆ ಇ-ಕೆವೈಸಿ ಮಾಡಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಮಣ್ಣು ಸಂರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಅಂತೆಯೇ, ನೀರಿನ ಸಂರಕ್ಷಣೆಗೂ ಮುತುವರ್ಜಿವಹಿಸಬೇಕು. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಲಯ ಮೇಲ್ವಿಚಾರಕ ಶಬರೀಷ್ ಮಾತನಾಡಿ ಸಂಘದ ಸದಸ್ಯರ ಏಳಿಗೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿನಿಧಿ, ಸುಜ್ಞಾನ ಶಿಷ್ಯನಿಧಿ, ಆರೋಗ್ಯ ನಿಧಿ, ಜ್ಞಾನದೀಪದ ನಿಧಿ, ವಿಪತ್ತು ನಿರ್ವಹಣೆ ನಿಧಿ ನೀಡಲಾಗುತ್ತದೆ, ಶೇ.59 ಪೈಸೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ, ಕುರಿಶೆಡ್ ನಿರ್ಮಾಣ, ಕೃಷಿ ಹೊಂಡ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಜ್ಞಾನದೀಪ ನಿಧಿ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ, ಸಂಬಳ ನೀಡಲಾಗುವುದು. ಸ್ಥಳೀಯರು ಶಾಲೆಗಳ ಮಾಹಿತಿ ನೀಡಿ ಪ್ರಯೋಜನ ಪಡೆಯಬಹುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಹಿಳೆಯರಿಗೆ ಸಾಲ ನೀಡಿ, ವಸೂಲಾತಿ ಮಾಡಲಷ್ಟೇ ಆದ್ಯತೆ ನೀಡಿಲ್ಲ. ಕೃಷಿ, ತೋಟಗಾರಿಕೆ, ನೀರಾವರಿ, ಮಣ್ಣು ಸಂರಕ್ಷಣೆ ಕುರಿತಾದ ತರಬೇತಿ ಕಾರ್ಯಾಗಾರಗಳನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅತ್ತಿಬೆಲೆ ಒಕ್ಕೂಟದ ಅಧ್ಯಕ್ಷೆ ಕಲ್ಪನಾ ತಿಳಿಸಿದರು.
ಗ್ರಾಪಂ ಸದಸ್ಯರಾದ ಬಸವರಾಜ್, ನಾಗೇಶ್, ಸಂಘದ ಸೇವಾ ಪ್ರತಿನಿಧಿ ಮಂಜುಳಾ, ಪುಷ್ಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net