

ಹುಬ್ಬಳ್ಳಿ: ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠದ ಅನ್ನ ದಾಸೋಹ ಅಡುಗೆ ಮನೆಗೆ ಸೌರಶಕ್ತಿ ವ್ಯವಸ್ಥೆ ಅಳವಡಿಸಲಾಗಿದೆ.
ಶ್ರೀ ಮಠದ ಟ್ರಸ್ಟ್ ಕಮಿಟಿ ಹಾಗೂ ಭಕ್ತಾದಿಗಳ ದೇಣಿಗೆಯಿಂದ ಸುಮಾರು 59 ಲಕ್ಷ ರೂ. ವೆಚ್ಚದಲ್ಲಿ ಇದು ಸಾಕಾರಗೊಂಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮಠದಲ್ಲಿ ಸಾರ್ವಜನಿಕ ಅನ್ನ ದಾಸೋಹ ಕಳೆದ 3 ತಿಂಗಳಿಂದ ಬಂದ್ ಇರುತ್ತದೆ. ಆದರೆ, ಸದ್ಯ ಸಾಧು ಸಂತರು, ಮಠದ ಸಿಬ್ಬಂದಿ ಸೇರಿ ನಿತ್ಯ ಸುಮಾರು 100-150 ಜನರಿಗೆ ಅಡುಗೆ ಮಾಡಲಾಗುತ್ತಿದೆ. ಈಗ ಅಳವಡಿಸಿರುವ ಸೌರಶಕ್ತಿ ವ್ಯವಸ್ಥೆ ನಿತ್ಯ ಸುಮಾರು 5 ಸಾವಿರ ಜನರಿಗೆ ಅಡುಗೆ ಬೇಯಿಸುವ ಸಾಮರ್ಥ್ಯ ಹೊಂದಿದೆ ಎಂದು ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ತಿಳಿಸಿದ್ದಾರೆ.
ಮಠದ ಯಾತ್ರಿ ನಿವಾಸದ ಕಟ್ಟಡದ ಮೇಲೆ ವರ್ತಲಾಕಾರದ ಸೋಲಾರ್ ಪ್ಯಾನೆಲ್ಗಳನ್ನು ಕೂಡ್ರಿಸಲಾಗಿದೆ. ಈ ಘಟಕವು ಸೌರಶಕ್ತಿಯನ್ನು ಬಳಸಿಕೊಂಡು ನಿತ್ಯ 975 ಕೆಜಿ ಸ್ಟೀಮ್ (ಹಬೆ) ಉತ್ಪಾದಿಸಲಿದೆ. ಬೆಳಗಾವಿಯ ಯುನಿಸನ್ಸ್ ಟೆಕ್ನಾಲಜಿಸ್ನ ಶಿವಾನಂದ ನಾಶಿ ಟೆಂಡರ್ ಪಡೆದಿದ್ದರು.
ಉದ್ಘಾಟನೆ: ಲಗೇಜ್ ರೂಂ ಕಟ್ಟಡ ಹಾಗೂ ಸೋಲಾರ್ ಪ್ಲಾಂಟ್ಗಳನ್ನು ಅಳವಡಿಸಿದ್ದರ ಉದ್ಘಾಟನೆಯನ್ನು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಇತ್ತೀಚೆಗೆ ನೆರವೇರಿಸಿದರು. ಲಗೇಜ್ ರೂಂದಲ್ಲಿ ಅಳವಡಿಸಲಿಕ್ಕೆ ಸ್ಟೀಲ್ ಕಪಾಟಗಳನ್ನು ದೇಣಿಗೆಯಾಗಿ ನೀಡಿದ ದಾನಿಗಳಾದ ಪ್ರಕಾಶ ಉಡಿಕೇರಿ, ಶಿವಾನಂದ ಭಾವಿಕಟ್ಟಿ, ಐಶ್ವರ್ಯ ಭಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಕಮಿಟಿ ಚೇರ್ಮನ್ ಡಿ.ಡಿ. ಮಾಳಗಿ, ವೈಸ್ ಚೇರ್ಮನ್ ಜಗದೀಶ ಮಗಜಿಕೊಂಡಿ, ಎಸ್.ಐ. ಕೋಳಕೂರ, ಜಿ.ಎಸ್. ನಾಯಕ, ಪ್ರಕಾಶ ಉಡಿಕೇರಿ, ವೈ.ಎ. ದೊಡ್ಡಮನಿ, ಶ್ರೀ ಮಠದ ಮ್ಯಾನೇಜರ್ ಈರಣ್ಣ ತುಪ್ಪದ, ಇತರರಿದ್ದರು.